ಕರಾಚಿ: ಶ್ರೀಲಂಕಾ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ 16 ಆಟಗಾರರನ್ನೊಳಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಮಾರಕ ವೇಗಿ ಶಾಹೀನ್ ಅಫ್ರಿದಿ ತಂಡ ಕೂಡಿಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇಂದು ಲಂಕಾ ಪ್ರವಾಸಕ್ಕೆ ಪಾಕ್ ತಂಡವನ್ನು ಪ್ರಕಟಿಸಿದೆ. ಇನ್ನು ಇದೇ ವೇಳೆ ಇಬ್ಬರು ಅನ್ಕ್ಯಾಪ್ ಆಟಗಾರರಿಗೂ ತಂಡದಲ್ಲಿ ಸ್ಥಾನ ನೀಡಿದ್ದು, ಬ್ಯಾಟರ್ ಮೊಹಮ್ಮದ್ ಹೊರೈರಾ ಹಾಗೂ ಆಲ್ರೌಂಡರ್ ಅಮಿರ್ ಜಮಾಲ್ ಇದೇ ಮೊದಲ ಬಾರಿಗೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬಾಬರ್ ಅಜಂ ನಾಯಕರಾಗಿ ಮುನ್ನಡೆಸಲಿದ್ದು, ತಂಡದಲ್ಲಿ ಹಲವು ಅನುಭವಿ ಹಾಗೂ ಯುವ ಆಟಗಾರರ ದಂಡೇ ಇದೆ. ಲಂಕಾ ಪ್ರವಾಸಕ್ಕೆ ಪಾಕ್ ತಂಡದಲ್ಲಿ ಮೊಹಮ್ಮದ್ ರಿಜ್ವಾನ್, ಅಬ್ದುಲ್ಲಾ ಶಫೀಕ್, , ಇಮಾಮ್ ಉಲ್ ಹಕ್, ಹಸನ್ ಅಲಿ ಹಾಗೂ ನಸೀಂ ಶಾ ತಂಡ ಕೂಡಿಕೊಂಡಿದ್ದಾರೆ. ಇನ್ನು ಎಡಗೈ ಮಾರಕ ವೇಗಿ ಶಾಹೀನ್ ಶಾ ಅಫ್ರಿದಿ ತಂಡ ಸೇರ್ಪಡೆ ಬಾಬರ್ ಅಜಂ ಪಡೆಯ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ.
“ವರ್ಷದ ಬಳಿಕ ನಾನು ಪಾಕಿಸ್ತಾನ ಟೆಸ್ಟ್ ತಂಡವನ್ನು ಕೂಡಿಕೊಂಡಿರುವುದಕ್ಕೆ ನಿಜಕ್ಕೂ ಸಂತೋಷವಾಗುತ್ತಿದೆ. ನಾನು ಟೆಸ್ಟ್ ಕ್ರಿಕೆಟ್ ಅನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಈ ಮಾದರಿಯ ಕ್ರಿಕೆಟ್ನಿಂದ ಹೊರಗುಳಿಯುವುದು ನನ್ನ ಪಾಲಿಗೆ ತುಂಬಾ ಬೇಸರದ ಸಂಗತಿಯಾಗಿತ್ತು” ಎಂದು ತಂಡ ಕೂಡಿಕೊಂಡ ಬಳಿಕ ಶಾಹೀನ್ ಅಫ್ರಿದಿ ಹೇಳಿದ್ದಾರೆ.