ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟ, ಆಹಾರ ಬಿಕ್ಕಟ್ಟಿನ ನಡುವೆಯೂ ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮುಂದಿನ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಮಣಿಸಲು ನವಾಜ್ ಶರೀಫ್ ಅವರನ್ನೇ ಕಣಕ್ಕಿಳಿಸಲು ಆಡಳಿತಾರೂಢ ಪಕ್ಷ ಪಿಎಂಎಲ್-ಎನ್ ನೇತೃತ್ವದ ಸರ್ಕಾರ ಸಜ್ಜುಗೊಂಡಿದೆ.
ಪಾಕಿಸ್ತಾನ ಪಿಎಂ ಶೆಹಬಾಜ್ ಶರೀಫ್ ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ್-ಎನ್) ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿ, ಪಕ್ಷದ ಮುಂದಾಳತ್ವ ವಹಿಸಲು ನನ್ನ ಹಿರಿಯ ಸಹೋದರ ನವಾಜ್ ಶರೀಫ್ ದೇಶಕ್ಕೆ ಮರಳುವುದನ್ನೇ ಕಾಯುತ್ತಿದ್ದೇನೆ ಎಂದಿದ್ದಾರೆ.
2019ರಿಂದಲೂ ಲಂಡನ್ನಲ್ಲಿರುವ ಮಾಜಿ ಪ್ರಧಾನಿ ನವಾಜ್, ಪನಾಮಾ ಪೇಪರ್ಸ್ ಹಗರಣದ ಹಿನ್ನೆಲೆಯಲ್ಲಿ ಪಾಕ್ಗೆ ಮರಳಿದರೂ ಯಾವುದೇ ಪಕ್ಷದ ನೇತೃತ್ವ ವಹಿಸುವಂತಿಲ್ಲ. ಆದರೆ ಇದನ್ನು ಮರುಪರಿಶೀಲಿಸಲು ಶೆಹಬಾಜ್ ಶರೀಫ್ ಅನುಮತಿ ನೀಡಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್ನಲ್ಲಿ ತಮ್ಮ ವಿರುದ್ಧದ ತೀರ್ಪು ಪ್ರಶ್ನಿಸಲು ನವಾಜ್ಗೆ 60 ದಿನಗಳ ಕಾಲವಕಾಶ ನೀಡಲಾಗಿದೆ.
ಇನ್ನು ರಾಜಕೀಯ ಗೊಂದಲಗಳೆಲ್ಲದರ ನಡುವೆ ಪಾಕಿಸ್ತಾನದ ವಿದೇಶಿ ಮೀಸಲು ನಿಧಿ ಕುಸಿಯುತ್ತಿದ್ದು, ಈ ವಾರ ಮೀಸಲು ನಿಧಿ 3.9 ಶತಕೋಟಿ ಡಾಲರ್ಗೆ ಇಳಿಕೆಯಾಗಿತ್ತು. ಈ ಬೆನ್ನಲ್ಲೇ, ಚೀನಾ ಪಾಕಿಸ್ತಾನಕ್ಕೆ 1 ಶತಕೋಟಿ ಡಾಲರ್ ನೀಡಿದೆ ಎಂಬುದಾಗಿ ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.