ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂಪುಟ ವಿಸ್ತರಣೆ ಮಾಡಿದ್ದು, ಈ ಹಿಂದೆ ನಾಲ್ಕು ಬಾರಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಮುಹಮ್ಮದ್ ಇಶಾಖ್ ದರ್ ಅವರನ್ನು ವಿದೇಶಾಂಗ ಸಚಿವರಾಗಿ ನೇಮಕ ಮಾಡಲಾಗಿದೆ.
ಭಾರತ, ಅಫ್ಗಾನಿಸ್ತಾನ ಸೇರಿದಂತೆ ನೆರೆಯ ದೇಶಗಳೊಂದಿಗೆ ಹಲವು ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ವಿದೇಶಾಂಗ ಸಚಿವ ಸ್ಥಾನವು ಮಹತ್ವದ್ದಾಗಿದೆ. ಇಂಥ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳಲ್ಲಿ ಕಡಿಮೆ ಅನುಭವ ಹೊಂದಿರುವ ದರ್ ಅವರಿಗೆ ಪ್ರಮುಖ ಖಾತೆ ನೀಡಲಾಗಿದೆ.
ಕಾಶ್ಮೀರಿ ಜನಾಂಗದ ದರ್ ಅವರು ವೃತ್ತಿಯಿಂದ ಚಾರ್ಟಡ್ ಅಕೌಂಟೆಂಟ್ ಆಗಿದ್ದು, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಜತೆಗೆ ಪಕ್ಷದ ವರಿಷ್ಠ ನವಾಜ್ ಷರೀಫ್ ಅವರ ನಂಬಿಕಸ್ಥ ಬೆಂಬಲಿಗರಾಗಿದ್ದಾರೆ.