ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಅನ್ನು ಅಪವಿತ್ರಗೊಳಿದ್ದಾರೆಂದು ಆರೋಪಿಸಿ ಉದ್ರಿಕ್ತರ ಗುಂಪೊಂದು ಠಾಣೆಯಲ್ಲೇ ವ್ಯಕ್ತಿಯೊಬ್ಬನನ್ನ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಖೈಬರ್ ಪಖ್ತುಂಕ್ವಾದ ಸ್ವಾತ್ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಪಾಕಿಸ್ತಾನದ ಪಂಜಾಬ್ನ ಸಿಯಾಲ್ಕೋಟ್ ಜಿಲ್ಲೆಯ ವ್ಯಕ್ತಿಯೊಬ್ಬ ತೆಹಸಿಲ್ನಲ್ಲಿ ಪವಿತ್ರ ಕುರಾನ್ ಗ್ರಂಥದ ಕೆಲವು ಪುಟಗಳನ್ನು ಸುಟ್ಟು ಹಾಕಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಆದ್ರೆ ಉದ್ರಿಕ್ತರ ಗುಂಪು ಠಾಣೆ ಮುಂದೆ ಜಮಾಯಿಸಿ ಆತನನ್ನು ತಮಗೆ ಒಪ್ಪಿಸುವಂತೆ ಪಟ್ಟು ಹಿಡಿದಿತ್ತು. ಒಪ್ಪಿಸಲು ಪೊಲೀಸರು ನಿರಾಕರಿಸಿದ ನಂತರ ಆರೋಪಿಯನ್ನ ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಜಹಿದುಲ್ಲಾ ತಿಳಿಸಿದ್ದಾರೆ.
ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಮಧ್ಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯನ್ನು ಒಪ್ಪಿಸಲು ಪೊಲೀಸರು ನಿರಾಕರಿಸುತ್ತಿದ್ದಂತೆ ರೊಚ್ಚಿಗೆದ್ದ ಜನ ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದು ಆತನ ಮೃತದೇಹವನ್ನು ಹೊರಗೆಳೆದು ಅದನ್ನು ಮರಕ್ಕೆ ನೇತು ಹಾಕಿ ವಿಕೃತಿ ಮೆರೆದಿದೆ. ಘಟನೆಯಲ್ಲಿ 8 ಮಂದಿಗೆ ಗಂಭೀರ ಗಾಯಗಳಾಗಿವೆ, ಕೆಲ ಪೊಲೀಸರೂ ಗಾಯಗೊಂಡಿದ್ದಾರೆ ಎಂದು ಜಹೀದುಲ್ಲಾ ಹೇಳಿದ್ದಾರೆ.