2023ರ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧ ಕೆಟ್ಟ ಫೀಲ್ಡಿಂಗ್, ಬೌಲಿಂಗ್ ಹಾಗೂ ನಿಧಾನಗತಿಯ ಬ್ಯಾಟಿಂಗ್ ನಿಂದ ಸೋಲು ಕಂಡಿರುವ ಪಾಕಿಸ್ತಾನದ ಆಟಗಾರರ ಫಿಟ್ನೆಸ್ ಅನ್ನು ವಿಶ್ವಕಪ್ ವಿಜೇತ ನಾಯಕ ವಸೀಮ್ ಅಕ್ರಮ್ ಅವರು ಕಟುವಾಗಿ ಟೀಕಿಸಿದ್ದಾರೆ.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಕೊಂಡಿರುತ್ತಾದರೂ ನಂತರ ಹ್ಯಾಟ್ರಿಕ್ ಸೋಲು ಕಂಡಿರುವ ಬಾಬರ್ ಆಝಮ್ ಪಡೆ ಸೆಮಿಫೈನಲ್ ತಲುಪುವುದೇ ಎಂಬ ಪ್ರಶ್ನೆ ಮೂಡಿದೆ. ಸೋಮವಾರ (ಅಕ್ಟೋಬರ್ 23) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತನಗಿಂತ ಕಡಿಮೆ ಶ್ರೇಯಾಂಕ ಹೊಂದಿರುವ ಹಶ್ಮತ್ಉಲ್ಲಾ ಶಾಹಿದಿ ಸಾರಥ್ಯದ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋತಿರುವುದನ್ನು ವಸೀಮ್ ಅಕ್ರಮ್ ಹೀಯಾಳಿಸಿದ್ದಾರೆ.
ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ತಂಡಗಳು ಇದುವರೆಗೂ 7 ಬಾರಿ ಮುಖಾಮುಖಿ ಆಗಿತ್ತು. ಎಲ್ಲ ಪಂದ್ಯಗಳಲ್ಲೂ ಬಾಬರ್ ಆಝಮ್ ಪಡೆಯೇ ಗೆಲುವು ಸಾಧಿಸಿದ್ದರಿಂದ ವಿಶ್ವಕಪ್ ಪಂದ್ಯದಲ್ಲೂ ಪಾಕ್ ಗೆಲುವು ಸಾಧಿಸುವ ನೆಚ್ಚಿನ ತಂಡವಾಗಿತ್ತಾದರೂ, 283 ರನ್ ಗಳನ್ನು ನಿಯಂತ್ರಿಸುವಲ್ಲಿ ಪಾಕ್ ಬೌಲರ್ಸ್ ಗಳು ಮುಗ್ಗರಿಸಿದ್ದರು.
“ಪಾಕ್ ಆಟಗಾರರ ಫಿಟ್ನೆಸ್ ಮಟ್ಟವನ್ನು ಸೂಕ್ಷ್ಮವಾಗಿ ಗಮನಿಸಿ, ಕಳೆದ 2 ವರ್ಷಗಳಿಂದ ಫಿಟ್ನೆಸ್ ಪರೀಕ್ಷೆಯನ್ನು ಎದುರಿಸಿಲ್ಲ. ನಾನು ಇಲ್ಲಿ ವೈಯಕ್ತಿಕವಾಗಿ ಯಾರ ಹೆಸರನ್ನು ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಹಾಗೇನಾದರೂ ಮಾಡಿದರೆ ಅವರ ಮುಖಗಳು ಬಾಡುತ್ತದೆ. ಈ ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿನ್ನುತ್ತಿದ್ದಾರೆ ಎಂದು ಗೋಚರಿಸುತ್ತದೆ. ಅದಕ್ಕೆ ತಕ್ಕಂತೆ ಫಿಟ್ನೆಸ್ ಸಾಬೀತುಪಡಿಸಬೇಕಲ್ಲವೆ,” ಎಂದು ಮಾಜಿ ನಾಯಕ ಛಾಟಿ ಬೀಸಿದ್ದಾರೆ.