ನವದೆಹಲಿ: ಪಾಕಿಸ್ತಾನದ ಶಾಲೆಗಳಲ್ಲಿನ 8 ಮತ್ತು 9 ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳಲ್ಲಿ ಭಾರತ ವಿರೋಧಿ ಹಾಗೂ ಹಿಂದೂ ವಿರೋಧಿ ವಿಷಯಗಳು ತುಂಬಿವೆ ಎಂದು ವರದಿಯಾಗಿದೆ.
ತನ್ನ ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಪಠ್ಯಪುಸ್ತಕಗಳಲ್ಲಿ ಭಾರತದ ವಿರುದ್ಧ ತಪ್ಪು ಮಾಹಿತಿಗಳನ್ನು ಮಕ್ಕಳಿಗೆ ಕಲಿಸುತ್ತಿದೆ ಎಂದು ವರದಿಯಾಗಿದೆ.
ನ್ಯಾಷನಲ್ ಬುಕ್ ಫೌಂಡೇಶನ್ 8 ಮತ್ತು 9 ನೇ ತರಗತಿಯ ಪಠ್ಯಪುಸ್ತಕಗಳನ್ನು ಪ್ರಕಟಿಸಿದೆ. ಪುಸ್ತಕದಲ್ಲಿ ಬ್ರಿಟಿಷರ ಕಾಲದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚನೆಗೆ ಅನೇಕ ಭಾರತೀಯರು ಕೈ ಜೋಡಿಸಿದರು. ಧರ್ಮದಲ್ಲಿ ಸಂಪೂರ್ಣವಾಗಿ ಹಿಂದೂವಾಗಿದ್ದರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇಡೀ ಭಾರತದ ಧ್ವನಿಗಿಂತ ಹೆಚ್ಚು ಹಿಂದೂ ಧ್ವನಿಯ ರಾಜಕೀಯ ಪಕ್ಷವಾಯಿತು ಎಂದು ಉಲ್ಲೇಖಿಸಿದೆ.
ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟವನ್ನು ಮುನ್ನಡೆಸಿದ ಮಹಾತ್ಮ ಗಾಂಧಿ ಅವರನ್ನು ಕೇವಲ “ಹಿಂದೂ ನಾಯಕ” ಎಂದು ಪುಸ್ತಕದಲ್ಲಿ ಪರಿಚಯಿಸಲಾಗಿದೆ. ಪಠ್ಯ ಪುಸ್ತಕದಲ್ಲಿ “ಮುಸ್ಲಿಮರನ್ನು ಕಡೆಗಣಿಸುವ” ಆರೋಪವನ್ನು ಹೊರಿಸಲಾಗಿದೆ. ಗಾಂಧಿ ಮತ್ತು ಅವರ ಯುವ ಬೆಂಬಲಿಗರು ಕಾಂಗ್ರೆಸ್ನ ಉಸ್ತುವಾರಿಯನ್ನು ವಹಿಸಿಕೊಂಡರು. ಮುಸ್ಲಿಂ ಹಕ್ಕುಗಳನ್ನು ಕಡೆಗಣಿಸಿ ದ್ವೇಷ, ಅಸೂಯೆ ಮತ್ತು ಸಂಕುಚಿತ ಮನೋಭಾವವನ್ನು ಸೃಷ್ಟಿಸಿದರು ಎಂದು ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.
ಮುಸ್ಲಿಂ ಹಕ್ಕುಗಳ ಹೋರಾಟದಲ್ಲಿ ಹಿಂದೂಗಳನ್ನು ನಂಬಲು ಸಾಧ್ಯವಾಗದಿರುವ ಬಗ್ಗೆ ಪುಸ್ತಕದಲ್ಲಿ ಹಲವಾರು ನಿದರ್ಶನಗಳಿವೆ. ಬಂಗಾಳದ ವಿಭಜನೆಯು ಮುಸ್ಲಿಮರಿಗೆ ಆ ಅರಿವನ್ನು ತಂದಿತು. ಹಿಂದೂ ಬಹುಸಂಖ್ಯಾತರಿಂದ ಯಾವುದೇ ನ್ಯಾಯೋಚಿತ ಮಾರ್ಗವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಮುಸ್ಲಿಂ ನಾಯಕರು ತಮ್ಮ ಸಮುದಾಯಕ್ಕೆ ಪ್ರತ್ಯೇಕ ಮತದಾನ ಯೋಜನೆಯನ್ನು ರೂಪಿಸಿದರು ಎಂದು ಬರೆಯಲಾಗಿದೆ.