ಪಂಚಭಾಷೆಯಲ್ಲಿ ತಯ್ಯಾರಾಗುತ್ತಾ ಪ್ಯಾನ್ ಇಂಡಿಯಾ ತುಂಬೆಲ್ಲಾ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಮಧ್ಯೆ ಕನ್ನಡದಲ್ಲಿ ನಿರ್ಮಾಣಗೊಂಡು ಬಿಡುಗಡೆಯ ಹೊಸ್ತಿಲಲ್ಲಿರುವ `ಇನಾಮ್ದಾರ್’ (Inamdar) ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಳ್ತಿದೆ. ಹೌದು, ಟ್ರೇಲರ್ ನೋಡಿ ಇಂಪ್ರೆಸ್ ಆಗಿರುವ ಪರಭಾಷಾ ಸಿನಿಮಾ ಮಂದಿ `ಇನಾಮ್ದಾರ್’ ಚಿತ್ರದ ಹಕ್ಕುಗಳನ್ನು ತಮ್ಮ ಸ್ವಾದೀನಕ್ಕೆ ಪಡೆಯಲು ಮುಂದೆ ಬರುತ್ತಿದ್ದಾರಂತೆ. ಈ ಕುರಿತು ಸಂತೋಷ ಹಂಚಿಕೊಂಡ ಚಿತ್ರದ ನಿರ್ದೇಶಕರಾದ ಸಂದೇಶ್ ಶೆಟ್ಟಿ (Sandesh Shetty) ಆಜ್ರಿಯವರು `ಇನಾಮ್ದಾರ್’ ಸೃಷ್ಟಿಸಲಿರುವ ಸಂಚಲನ ಹಾಗೂ ತಲ್ಲಣದ ಬಗ್ಗೆ ಮಾತಿಗಿಳಿದರು. ಹೆಸರಾಂತ ಹಿರಿಯ ನಟ ನಾನಾ ಪಾಟೇಕರ್ ಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿರುವ ಕುರಿತು ಮಾಹಿತಿ ಹೊರಹಾಕಿದರು. ಪಂಕಜ್ ತ್ರಿಪಾಠಿ ಹಾಗೂ ನಾನಾ ಪಾಟೇಕರ್ (Nana Patekar) ಇಬ್ಬರನ್ನೂ ಸೇರಿಸಿ ಸಿನಿಮಾ ಮಾಡಲಿದ್ದು, ಬಾಲಿವುಡ್ ನಿರ್ಮಾಪಕರು ಬಂಡವಾಳ ಹೂಡಲು ಮುಂದೆ ಬಂದಿರುವುದಾಗಿ ಹೇಳಿಕೊಂಡರು.
ಸಂದೇಶ್ ಶೆಟ್ಟಿ ಆಜ್ರಿ ಕರಾವಳಿ ಭಾಗದ ನಿರ್ದೇಶಕರು. ಕಳೆದ ಮೂರು ವರ್ಷಗಳ ಹಿಂದೆ `ಕತ್ತಲೆ ಕೋಣೆ’ ಎಂಬ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ ಮಾಡಿದ್ದರು. ಈಗ ಭಿನ್ನ ಕಥಾಹಂದರವುಳ್ಳ `ಇನಾಮ್ದಾರ್’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳಲು ರೆಡಿಯಾಗಿದ್ದಾರೆ. ಟೀಸರ್ ನಲ್ಲಿ ದಟ್ಟಕಾನನ ಹಾಗೂ ಬುಡಕಟ್ಟು ಜನಾಂಗದ ದರ್ಶನ ಮಾಡಿಸಿ ಸಿನಿಮಾಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದ್ದರು. ಕೌತುಕದ ಜೊತೆಗೆ ಕಿಕ್ ಇರಲೆಂದು `ಸಿಲ್ಕು ಮಿಲ್ಕು’ ಸುಂದರಿನಾ ಕಣಕ್ಕಿಳಿಸಿದ್ದರು. ಆಕೆ ಅಖಾಡವನ್ನ ಕಬ್ಜ ಮಾಡಿಕೊಂಡ ಬೆನ್ನಲ್ಲೇ ಈಗ ಟ್ರೈಲರ್ ಹೊರಬಿದ್ದಿದೆ. ಮಾಸ್, ಕ್ಲಾಸ್ ಎನ್ನದೇ ಎಲ್ಲಾ ವರ್ಗದ ಸಿನಿಮಾ ಪ್ರೇಮಿಗಳನ್ನ ತನ್ನತ್ತ ಸೆಳೆಯುತ್ತಿದೆ. ಅಚ್ಚರಿಯೆಂಬಂತೆ `ಇನಾಮ್ದಾರ್’ಗೆ ಪರಭಾಷೆಯಲ್ಲಿಯೂ ಬೇಡಿಕೆ ಹೆಚ್ಚುತ್ತಿದೆ. ಡಬ್ಬಿಂಗ್ ರೈಟ್ಸ್ ಕೊಳ್ಳಲು ಹಲವರು ಮುಂದೆ ಬಂದಿದ್ದು `ಇನಾಮ್ದಾರ್’ ತಂಡಕ್ಕೆ ಹೊಸ ಹುರುಪು ತುಂಬಿದೆ. ಕನ್ನಡದ ಜೊತೆಗೆ ಬೇರೆ ಭಾಷೆಗೂ ಸಿನಿಮಾನ ಡಬ್ ಮಾಡಿ ರಿಲೀಸ್ ಮಾಡುವ ಪ್ಲ್ಯಾನ್ ನಿರ್ದೇಶಕರಿಗಿದೆ
ಇನ್ನೂ `ಇನಾಮ್ದಾರ್’ ಚಿತ್ರಕ್ಕಾಗಿ ನಿರ್ದೇಶಕ ಸಂದೇಶ್ ಶೆಟ್ಟಿ ಎರಡು ವರ್ಷ ಶ್ರಮಪಟ್ಟಿದ್ದಾರೆ. ಛತ್ರಪತಿ ಶಿವಾಜಿ ಮಹರಾಜ್ ರಿಂದ ಇನಾಮ್ ಪಡೆದಂತಹ ವಂಶಸ್ಥರನ್ನು ಸಂಪರ್ಕ ಮಾಡಿ ಮಾಹಿತಿ ಕಲೆಹಾಕಿರುವ ನಿರ್ದೇಶಕರು, ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ಬರೆದಿರುವ `ಶಿವಾಜಿ ಮೂಲ ಕನ್ನಡದ ನೆಲ’ ಪುಸ್ತಕವನ್ನು ಆಧಾರಗ್ರಂಥವನ್ನಾಗಿಸಿಕೊಂಡು `ಇನಾಮ್ದಾರ್’ ಚಿತ್ರ ಕಟ್ಟಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಛತ್ರಪತಿ ಶಿವಾಜಿಯನ್ನು ಆರಾಧಿಸುವ ಇನಾಮ್ದಾರ್ ಕುಟುಂಬ ಹಾಗೂ ಕರಾವಳಿಯಲ್ಲಿ ಸಾಕ್ಷಾತ್ ಶಿವನನ್ನು ಪೂಜಿಸುವ ಕಾಡು ಜನರ ನಡುವೆ ನಡೆಯುವ ವರ್ಣಸಂಘರ್ಷದ ಕಥೆಯನ್ನು ಸಿನಿಮಾವಾಗಿಸಿದ್ದಾರೆ. ಕೆಳಜಾತಿಯವರ ಮೇಲೆ ಮೇಲ್ವರ್ಗದ ದಬ್ಬಾಳಿಕೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಸಮಾನತೆ-ಸೌಹಾರ್ದತೆ ಬರೀ ಬಾಯಿಮಾತಿಗಷ್ಟೇ ಸೀಮಿತವಾಗಿರಬಾರದು, ಅದು ಜಾರಿಯಾಗ್ಬೇಕು ಎನ್ನುವ ನಿಟ್ಟಿನಲ್ಲಿಯೇ ಶೆಟ್ರು ಅಖಾಡಕ್ಕಿಳಿದಿದ್ದಾರೆ. ತನ್ನ ಕನಸಿನ `ಇನಾಮ್ದಾರ್’ ಮೂಲಕ ಕರಾಳತೆಯನ್ನು ಬಟಾಬಯಲು ಮಾಡಿ ಜನರನ್ನೂ ಜಾಗೃತಗೊಳಿಸ್ತೇನೆ ಎಂತಲೂ ತಿಳಿಸಿದ್ದಾರೆ