ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಎಲ್ಲ ಲಿಂಗಾಯತ ಉಪಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗಾಗಿ ಕಾನೂನಾತ್ಮಕ ಹೋರಾಟ ನಡೆಸಲು ಬೆಂಗಳೂರಿನಲ್ಲಿ ಜುಲೈ 23ರಂದು ಸಮಾಜದ ವಕೀಲರ ರಾಜ್ಯಮಟ್ಟದ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ಈಗ ಏಳನೇ ಹಂತದ ಪತ್ರ ಚಳವಳಿ ನಡೆಸಲಾಗುತ್ತಿದೆ. ಮುಂದಿನ ಹಂತದಲ್ಲಿ ಕಾನೂನು ಹೋರಾಟಕ್ಕೆ ಸಮಾಜದ ಹಿರಿಯ ವಕೀಲರ ತಂಡ ರಚನೆ ಮಾಡಲಾಗುವುದು ಎಂದರು.
ಸಭೆಯ ಬಳಿಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ, ಮುಖ್ಯಮಂತ್ರಿ, ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಅಲ್ಲದೆ, ಜಿಲ್ಲಾ, ತಾಲ್ಲೂಕು ಮಟ್ಟದದಲ್ಲಿ ವಕೀಲರ ಸಂಘದ ಮೂಲಕ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ವಿವಿಧ ಪಕ್ಷಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ 20 ಶಾಸಕರಿದ್ದಾರೆ. ಎಲ್ಲರೂ ಈ ಅಧಿವೇಶನದಲ್ಲಿ ಮೀಸಲಾತಿಗಾಗಿ ಧ್ವನಿ ಎತ್ತಬೇಕು. ಆ ಮೂಲಕ ಸಮಾಜದ ಋಣ ತೀರಿಸಬೇಕು. ಸಮಾಜದ ಶಾಸಕರು ಗೆಲ್ಲಲು ಮೀಸಲಾತಿ ಹೋರಾಟವೂ ಕಾರಣ ಎಂದು ಹೇಳಿದರು.