ಸಲ್ಮಾನ್ ಖಾನ್ ಅವರಿಗೆ ದಿನದಿಂದ ದಿನಕ್ಕೆ ಜೀವ ಬೆದರಿಕೆ ಹೆಚ್ಚುತ್ತಿದೆ. ಅದರಲ್ಲೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆಯ ಬಳಿಕ ಸಲ್ಮಾನ್ ಗೆ ನೀಡಲಾಗಿರುವ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ನಿರಂತರ ಬೆದರಿಕೆಯಿಂದಾಗಿ ಸಲ್ಮಾನ್ ಖಾನ್ ಗೆ ಮುಂಬೈ ಪೊಲೀಸರು ವೈ ಪ್ಲಸ್ ಭದ್ರತೆ ನೀಡಿದ್ದಾರೆ. ಈ ಮಧ್ಯೆ ಕೆಲವು ಪಾಪರಾಜಿಗಳು ಸಲ್ಮಾನ್ ಖಾನ್ ಬಗ್ಗೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಫೋಟೋ ತೆಗೆಯಲು, ಮುಂದಿನ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಲು ಪಾಪಾರಾಜಿಗಳು ಕಾದು ಕೂತಿರ್ತಾರೆ. ಇದರ ಜೊತೆಗೆ ಸಲ್ಮಾನ್ ಖಾನ್ ಅವರ ಚಲನವಲಗಳ ಬಗ್ಗೆಯೂ ಪಾಪಾರಾಜಿಗಳು ಕಣ್ಣಿಟ್ಟಿರುತ್ತಾರೆ. ಆದರೆ ಸದ್ಯ ಸಲ್ಮಾನ್ ಭದ್ರತೆಯಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರಿಂದ ಹಿಡಿದು ಸಲ್ಮಾನ್ನ ಅಂಗರಕ್ಷಕರವರೆಗೆ ಎಲ್ಲರೂ ಅವರ ಸುತ್ತಲು ಸುತ್ತುತ್ತಿರುತ್ತಾರೆ.
ಸಲ್ಮಾನ್ಗೆ ಬಂದಿರುವ ಬೆದರಿಕೆಗಳ ಗಂಭೀರತೆಯನ್ನು ಪರಿಗಣಿಸಿ ಪಾಪರಾಜಿಗಳು ಅವರ ಸುರಕ್ಷತೆಗಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಪರಿಸ್ಥಿತಿ ಶಾಂತವಾಗುವವರೆಗೆ ಅಥವಾ ಸಲ್ಮಾನ್ ಮೇಲಿನ ಬಿಕ್ಕಟ್ಟು ಬಗೆಹರಿಯುವವರೆಗೆ ಸಲ್ಮಾನ್ ಅವರ ಯಾವುದೇ ಫೋಟೋನ ತೆಗೆದುಕೊಳ್ಳಬಾರದು. ಅಲ್ಲದೆ ಅವರ ಯಾವುದೇ ಕ್ಷಣಗಳನ್ನು ಶೂಟ್ ಮಾಡದಿರಲು ನಿರ್ಧರಿಸಿದ್ದಾರೆ. ಅವರ ಬಗ್ಗೆ ಯಾವುದೇ ಮಾಹಿತಿ ಹೊರ ಬರಬಾರದು ಎಂದು ಪಾಪರಾಜಿಗಳು ನಿರ್ಧರಿಸಿದ್ದಾರೆ.
ಸಲ್ಮಾನ್ ಇತ್ತೀಚೆಗೆ ಮುಂಬೈ ಫಿಲ್ಮ್ಸಿಟಿಯಲ್ಲಿರುವ ಹಿಂದಿ ಬಿಗ್ ಬಾಸ್ 18ರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಶೂಟಿಂಗ್ ಮುಗಿಯುವವರೆಗೂ ಸೆಟ್ನಲ್ಲಿದ್ದ ಯಾರಿಗೂ ಹೊರಹೋಗಲು ಅವಕಾಶವಿಲ್ಲ ಮತ್ತು ಅಪರಿಚಿತರನ್ನು ಸೆಟ್ಗೆ ಬಿಡಲಿಲ್ಲ. ಸಲ್ಮಾನ್ ಖಾನ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.