ಪಾಕಿಸ್ತಾನದಲ್ಲಿ ಪೋಲಿಯೋ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಈ ಹೊಸ ಕಾನೂನು ಜಾರಿಯಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಪೋಲಿಯೋ ಜೊತೆಯಲ್ಲೇ ಡಿಪ್ಟೀರಿಯಾ, ಟೆಟಾನಸ್, ರುಬೆಲ್ಲಾ ಸೇರಿದಂತೆ ಹಲವು ರೋಗಗಳ ವಿರುದ್ಧ ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸಲು ನೀಡಲಾಗುವ ಲಸಿಕೆಗಳನ್ನೂ ಪೋಷಕರು ಕಡ್ಡಾಯವಾಗಿ ಕೊಡಿಸಬೇಕಿದೆ.
ಒಂದು ವೇಳೆ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ರೋಗ ನಿರೋಧಕ ಲಸಿಕೆ ಕೊಡಿಸಲು ಹಿಂದೇಟು ಹಾಕಿದರೆ ಅಥವಾ ನಿರಾಕರಿಸಿದರೆ, ಪೋಷಕರನ್ನು ಒಂದು ತಿಂಗಳ ಕಾಲ ಸರ್ಕಾರ ಜೈಲಿಗೆ ಅಟ್ಟಬಹುದಾಗಿದೆ. ಹಾಗೂ 50 ಸಾವಿರ ಪಾಕಿಸ್ತಾನ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಪಾಕಿಸ್ತಾನದ 50 ಸಾವಿರ ರೂಪಾಯಿಗೆ ಭಾರತದ ರೂಪಾಯಿ ಮೌಲ್ಯ 13,487 ರೂಪಾಯಿ ಆಗುತ್ತದೆ.
ಕಳೆದ ವಾರವೇ ಈ ಕಾನೂನಿಗೆ ಸಿಂಧ್ ಪ್ರಾಂತ್ಯದ ಸ್ಥಳೀಯ ಸರ್ಕಾರ ಸಮ್ಮತಿ ಸೂಚಿಸಿ ಸಹಿ ಹಾಕಿದ್ದು, ಸೆಪ್ಟೆಂಬರ್ ತಿಂಗಳ ಆರಂಭದಿಂದಲೇ ಈ ಕಾನೂನು ಜಾರಿಗೆ ಬಂದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದಲ್ಲದೆ, ಪಾಕಿಸ್ತಾನದ ಮಾಜಿ ಸಚಿವ ಶಾಜಿಯಾ ಮರ್ರಿ ಅವರ ಹೇಳಿಕೆಯನ್ನೂ ಸುದ್ದಿ ಸಂಸ್ಥೆಗಳು ಪ್ರಕಟಿಸಿವೆ.
ಪಾಕಿಸ್ತಾನದ ಬಡತನ ನಿರ್ಮೂಲನೆ ಹಾಗೂ ಸಾಮಾಜಿಕ ಭದ್ರತಾ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಶಾಜಿಯಾ ಮರ್ರಿ ಅವರು, ಈ ಕಾನೂನಿನ ಪ್ರಾಮುಖ್ಯತೆ ವಿವರಿಸಿದ್ದಾರೆ. ಮಕ್ಕಳಿಗೆ ಲಸಿಕೆ ಕೊಡಿಸುವುದನ್ನು ವಿರೋಧಿಸಿ ಹಿಂದೇಟು ಹಾಕುವ ಹಾಗೂ ನಿರಾಕರಿಸುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇದು ಸೂಕ್ತ ಮಾರ್ಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ. ಪಾಕಿಸ್ತಾನದ ನೆಲದಿಂದ ಪೋಲಿಯೋ ವೈರಸ್ ನಿರ್ಮೂಲನೆ ಮಾಡಲು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.