ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆ ದಿನದಿಂದ ದಿನಕ್ಕೆ ಗರಿಗೆದರುತ್ತಿದೆ. ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹಾಗೂ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿಯಾಗಿಯೇ ಮತಭೇಟೆಗೆ ಇಳಿದಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಇಬ್ಬರ ನಡುವಿನ ಪೈಪೋಟಿ ತೀವ್ರಗೊಳ್ಳುತ್ತಿದ್ದು,
NDA ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿ ಪರವಾಗಿ ಆರ್ಯವೈಶ್ಯ ಸಮಾಜದ ಮುಖಂಡರ ಮನೆ ಮನೆಗೆ ತೆರಳಿ ವಿಧಾನ ಪರಿಷತ್ ಶಾಸಕರಾದ ಟಿ.ಎ ಶರವಣ ಅವರು ಮತಯಾಚನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಸುರೇಶ್ , ಸುಬ್ಬಯ ಶೆಟ್ಟಿ ಸೇರಿದಂತೆ ಹಲವಾರು ಸಮಾಜದ ನಾಯಕರು ಹಾಜರಿದ್ದರು.
ಇನ್ನೂ ಈ ವೇಳೆ ಮಾತನಾಡಿದ ಟಿ.ಎ ಶರವಣ ಅವರು, ನಿಖಿಲ್ ಕುಮಾರಸ್ವಾಮಿರವರು NDA ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗಾಗಿ ಎಲ್ಲರೂ ಸೇರಿ ಶ್ರಮಿಸಬೇಕಾಗಿದೆ. ಕೇಂದ್ರ ಸಚಿವರಾಗಿರುವ ಹೆಚ್.ಡಿ ಕುಮಾರಸ್ವಾಮಿರವರು ಕ್ಷೇತ್ರದ ಒಳಿತಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಕೇಂದ್ರ ಸಚಿವರಾಗಿರುವುದರಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ.
ಬಿಜೆಪಿ, ಜೆಡಿಎಸ್ ನಾಯಕರು ಒಂದಾಗಿ ನಿಖಿಲ್ ರವರಿಗೆ NDA ಟಿಕೆಟ್ ನೀಡಿದ್ದೇವೆ. ನಿಖಿಲ್ ರವರನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿರವರ ಕೈ ಬಲಪಡಿಸಬೇಕಾಗಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್ ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಟಿ.ಎ ಶರವಣ ಅವರು ಆರ್ಯವೈಶ್ಯ ಸಮಾಜದ ಮುಖಂಡರ ಬಳಿ ಮನವಿ ಮಾಡಿದರು.
ಮಿನಿಸಮರದ ಕಣದಲ್ಲಿ ಪ್ರತಿಷ್ಠೆಯ ಫೈಟ್ ಜೋರಾಗಿದೆ. ಗೆಲುವಿನ ನಗಾರಿ ಬಾರಿಸಲೇಬೇಕು ಅಂತ 3 ಪಕ್ಷಗಳು ಜಿದ್ದಿಗೆ ಬಿದ್ದಿವೆ. ಚನ್ನಪಟ್ಟಣದಲ್ಲಿ ಅಸಲಿಯುದ್ಧವೇ ನಡೀತಿದೆ. ಆದ್ರೆ, ಮತದಾರ ಯಾರಿಗೆ ಮಣೆ ಹಾಕುತ್ತಾನೆ. ಉಪಯುದ್ಧದ ಸಿಹಿಯನ್ನ ಯಾರಿಗೆ ಉಣಬಡಿಸಲಿದ್ದಾನೆ ಅನ್ನೋದು ನವೆಂಬರ್ 23ರ ಫಲಿತಾಂಶದ ದಿನ ಗೊತ್ತಾಗಲಿದೆ.