ವಾಷಿಂಗ್ಟನ್: ‘ಭಾರತವು ತನ್ನ ಅತ್ಯಂತ ಪರಿಣಾಮಕಾರಿ ಪಾಲುದಾರರಲ್ಲಿ ಒಂದಾಗಿದೆ’ ಎಂದು ಅಮೆರಿಕ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳ ಅಮೆರಿಕ ಪ್ರವಾಸವು ಆದ್ಯತೆಗಳ ಪಾಲುದಾರಿಕೆಯನ್ನು ಹೆಚ್ಚಿಸುವ ಅವಕಾಶವಾಗಿದೆ ಎಂದು ತಿಳಿಸಿದೆ.
ಪ್ರಧಾನಿ ಅವರ ಭೇಟಿಯು ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಭದ್ರತಾ ಪಾಲುದಾರಿಕೆಯನ್ನು ಬಲಪಡಿಸುವ ವಿಶ್ವಾಸವನ್ನೂ ಅಮೆರಿಕವು ವ್ಯಕ್ತಪಡಿಸಿದೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಜೂನ್ ತಿಂಗಳಲ್ಲಿ ತಮ್ಮ ಮೊದಲ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಜೂನ್ 22ರಂದು ಬೈಡನ್ ಮತ್ತು ಜಿಲ್ ಅವರು ಮೋದಿಯವರಿಗೆ ಭೋಜನಕೂಟದ ಆತಿಥ್ಯ ನೀಡಲಿದ್ದಾರೆ.
‘ಭಾರತದೊಂದಿಗಿನ ನಮ್ಮ ಪಾಲುದಾರಿಕೆಯು ನಮ್ಮ ಅತ್ಯಂತ ಪರಿಣಾಮಕಾರಿ ಸಂಬಂಧಗಳಲ್ಲಿ ಒಂದಾಗಿದೆ ಮತ್ತು ನಾವು ಹಲವಾರು ಪ್ರಮುಖ ಆದ್ಯತೆಗಳಲ್ಲಿ ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ’ ಎಂದು ರಾಜ್ಯ ಇಲಾಖೆಯ ಉಪ ಪತ್ರಿಕಾ ಕಾರ್ಯದರ್ಶಿ ವೇದಾಂತ್ ಪಟೇಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ, ಭದ್ರತಾ ಪಾಲುದಾರಿಕೆಯನ್ನು ನಿಕಟಗೊಳಿಸುವ ಅವಕಾಶವನ್ನು ಈ ಭೇಟಿ ಕಲ್ಪಿಸಲಿದೆ. ಜಾಗತಿಕ ಆರೋಗ್ಯ, ಹವಾಮಾನ ಬಿಕ್ಕಟ್ಟು ಸೇರಿದಂತೆ ಇತರ ಜಾಗತಿಕ ಸವಾಲುಗಳನ್ನು ಜಂಟಿಯಾಗಿ ಪರಿಹರಿಸುವ ಸಾಧ್ಯತೆ ಇದೆ. ಭಾರತಕ್ಕೆ ಆತಿಥ್ಯ ನೀಡಲು ನಾವು ಎದುರು ನೋಡುತ್ತಿದ್ದೇವೆ’ಎಂದೂ ಹೇಳಿದ್ದಾರೆ.