ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿಯಾದ ಬಳಿಕ ಬೇರೆ ಬೇರೆ ಇಂಡಸ್ಟ್ರಿಯಲ್ಲೂ ಈ ರೀತಿಯ ಸಮಿತಿ ರಚನೆಯಾಗಬೇಕು ಎಂಬ ಕೂಗು ಕೇಳಿ ಬರ್ತಿದೆ. ಈ ಮೂಲಕ ಸಾಕಷ್ಟು ನಟಿಯರು ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದಿಂದ ಮುಕ್ತಿ ಭಯಸುತ್ತಿದ್ದಾರೆ. ಅದೇ ರೀತಿ ಕನ್ನಡದಲ್ಲೂ ಒಂದು ಸಮಿತಿ ಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರಾಕ್ ಲೈನ್ ವೆಂಕಟೇಶ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಸಾಕಷ್ಟು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಭಾಗಿಯಾದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾತನಾಡಿ, ‘ಚಿತ್ರರಂಗಕ್ಕೆ ಹೆಣ್ಣು ಮಕ್ಕಳು ಬರುತ್ತಾರೆ ಎಂದರೆ ತಂದೆ-ತಾಯಿ ಸುಲಭದಲ್ಲಿ ಕಳುಹಿಸಬೇಕು. ಆ ರೀತಿ ಚಿತ್ರರಂಗ ಆಗಬೇಕು. ಎಲ್ಲರೂ ಡಾಕ್ಟರ್ ಆಗಿ, ಇಂಜಿನಿಯರ್ ಆಗಿ ಎನ್ನುತ್ತಾರೆ. ಆದರೆ, ಕೆಲವೇ ಕೆಲವರು ಮಾತ್ರ ನಟನೆಗೆ ಹೋಗಿ ಎಂದು ಹೇಳುತ್ತಾರೆ. ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿ ಇರ್ತಾರಾ ಎಂಬ ಪ್ರಶ್ನೆ ಮೂಡುವಂತೆ ಆಗಿದೆ’ ಎಂದಿದ್ದಾರೆ ನಾಗಲಕ್ಷ್ಮಿ.
‘ಕನ್ನಡ ಚಿತ್ರರಂಗದಲ್ಲಿ ಪಾಶ್ ಕಮಿಟಿ ಮಾಡಲಾಗುತ್ತಿದೆ. ವಾಣಿಜ್ಯ ಚಿತ್ರರಂಗಕ್ಕೆ ಪತ್ರ ಬರೆದಿದ್ದೇವೆ. ಇವತ್ತು ಮೀಟಿಂಗ್ಗೆ ಬಹಳ ಕಡಿಮೆ ನಟಿಯರು ಬಂದಿದ್ದಾರೆ. ಹೊರದೇಶದಲ್ಲಿ ಪ್ರೋಗ್ರಾಂ (ಸೈಮಾ) ಇತ್ತು. ಹೀಗಾಗಿ, ಅಲ್ಲಿಗೆ ಹೋಗಿದ್ದಾರೆ ಎಂದರು. ನನಗೆ ಅನಾರೋಗ್ಯ ಆಗಿದೆ. ಆದರೂ ಬಂದಿದ್ದೇನೆ. ಮುಂದಿನ ಸಭೆಯಲ್ಲಿ ಎಲ್ಲರೂ ಬರುವಂತೆ ಆಗಬೇಕು’ ಎಂದರು.
‘ಕಮಿಟಿ ಹೇಗೆ ಇರಬೇಕು ಎನ್ನುವ ಕುರಿತು ಕಾನೂನು ಇದೆ. ಅದೇ ರೀತಿಯಲ್ಲಿ ಸಮಿತಿ ರಚನೆ ಆಗಲಿದೆ. ಇದು ನಟಿಯರಿಗೆ ಫ್ಯಾಮಿಲಿ. ನಟಿಯರು ಸಿನಿಮಾದಲ್ಲಿ ನಟಿಸಬೇಕು ಎಂದಾಗ 17 ಪಾಯಿಂಟ್ಸ್ ಇದೆ. ಯಾವ ಯಾವ ಫೆಸೆಲಿಟಿ ನೀಡಬೇಕು ಎಂಬುದರ ಉಲ್ಲೇಖ ಇದೆ. ಪಾಶ್ ಕಮಿಟಿ ಇರುತ್ತದೆ. ಸರ್ಕಾರದ ಗೆಜೆಟ್ನಲ್ಲಿ ಈ ಸಮಿತಿ ಬರುತ್ತದೆ. ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ಸಮಿತಿ ಮಾಡಲೇಬೇಕು. ಅದನ್ನು ಯಾರೂ ಮಾಡಲ್ಲ ಎಂದು ಹೇಳೋಕೆ ಆಗಲ್ಲ. ಮಹಿಳೆಯರಿಗೆ ರಕ್ಷಣೆ ನೀಡಲು ಇದನ್ನು ಮಾಡಲೇಬೇಕು. ಇದನ್ನು ಮಾಡೇ ಮಾಡುತ್ತೇವೆ. ಈ ಸಮಿತಿಗೆ ಹಿರಿಯ ನಟಿ ಅಧ್ಯಕ್ಷರಾಗಿರಬೇಕು. ಅರ್ಧದಷ್ಟು ಸದಸ್ಯರು ಮಹಿಳೆಯರಾಗಬೇಕು. ಮಹಿಳೆಯರ ಪರ ಹೋರಾಡುವ ಒಬ್ಬರು ಈ ಸಮಿತಿಯಲ್ಲಿ ಇರಬೇಕು’ ಎಂದು ತಿಳಿಸಿದರು.