ಅಗ್ನಿಶಾಮಕ ಟ್ರಕ್ಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ವಿಮಾನ: ಇಬ್ಬರು ಸಿಬ್ಬಂದಿ ಸಾವು

ಅಂತರಾಷ್ಟ್ರೀಯ

ಲಿಮಾ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಟೇಕ್ ಆಫ್ ಆಗುತ್ತಿದ್ದ ಪ್ಯಾಸೆಂಜರ್ ವಿಮಾನವೊಂದು ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸಿಬ್ಬಂದಿ ಸಾವಾಗೀಡಾಗಿರುವ ಘಟನೆ ಪೆರುವಿನ ಜಾರ್ಜ್ ಚಾವೆಜ್‌ನಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲಾ ತಾಣದಲ್ಲಿ ಹರಿದಾಡುತ್ತಿದೆ.

ವೀಡಿಯೋದಲ್ಲಿ ಅಗ್ನಿಶಾಮಕ ಟ್ರಕ್ ರನ್‌ವೇಯಲ್ಲಿ ವೇಗವಾಗಿ ಸಾಗುತ್ತಿರುವುದು ಕಂಡುಬಂದಿದ್ದು, ಎದುರುಗಡೆ ಲ್ಯಾಂಡ್ ಆಗುತ್ತಿದ್ದ ವಿಮಾನವನ್ನು ಕಂಡ ಅಗ್ನಿಶಾಮಕ ಟ್ರಕ್‌ನಲ್ಲಿದ್ದವರು ಅಪಘಾತವನ್ನು ತಪ್ಪಿಸಲು ವಾಹನವನ್ನು ಯೂ ಟರ್ನ್ ಹೊಡೆದಿದ್ದಾರೆ. ಆದರೂ ಅಪಘಾತವನ್ನು ತಪ್ಪಿಸಲು ಸಾಧ್ಯವಾಗದೇ ವಿಮಾನ ವೇಗವಾಗಿ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತಕ್ಕೊಳಗಾದ ಲತಮ್ ಏರ್‌ಲೈನ್ಸ್‌ನ ಎ320 ಏರ್‌ಬಸ್‌ನಲ್ಲಿ 102 ಪ್ರಯಾಣಿಕರಿದ್ದರು. ಡಿಕ್ಕಿ ಸಂಭವಿಸಿದ ಪರಿಣಾಮ ವಿಮಾನದ ರೆಕ್ಕೆ, ಹಿಂಭಾಗಕ್ಕೆ ಬೆಂಕಿ ತಗುಲಿದೆ. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಘಟನೆಯ ಬಳಿಕ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಿಗೆ ಎಲ್ಲಾ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.