ನವದೆಹಲಿ: ಇತ್ತೀಚಿನ ಕೆಲ ತಿಂಗಳುಗಳಿಂದ ವಿಮಾನದಲ್ಲಿ ಪ್ರಯಾಣಿಕರು ಕುಡಿದು ಮಾಡುವ ಕಿತಾಪತಿಗಳಿಂದಾಗಿ ವಿಮಾನ ಪ್ರಯಾಣದ ಬಗ್ಗೆ ವಿಮಾನದಲ್ಲಿ ಪ್ರಯಾಣಿಸುವ ದೊಡ್ಡವರ ಬಗ್ಗೆ ಜನ ಸಾಮಾನ್ಯರಲ್ಲಿ ಒಂದು ರೀತಿಯ ಅಸಹ್ಯಭಾವ ಮೂಡಿತ್ತು. ಕೆಲವರು ವಿಮಾನದಲ್ಲಿ ಪ್ರಯಾಣಿಕರು ಕುಡಿದು ಗಗನಸಖಿಗಳಿಗೆ ಕಿರುಕುಳ ನೀಡಿದ್ದಲ್ಲದೇ ಕೆಲವರು ವಿಮಾನದ ಸಿಬ್ಬಂದಿಯ ಮೇಲೆ ಹಲ್ಲೆ ಕೂಡ ಮಾಡಿದ್ದ ಘಟನೆಗಳು ನಡೆದಿದ್ದವು. ಇಂತಹ ಅಸಹ್ಯರ ಘಟನೆಗಳ ನಡುವೆ ಈಗ ವಿಮಾನದಲ್ಲಿ ಪ್ರಯಾಣಿಕರು ಡಾನ್ಸ್ ಮಾಡಿದ ಘಟನೆ ನಡೆದಿದೆ.
ಹೌದು, 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಹಾಡೊಂದಕ್ಕೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಪ್ರಯಾಣಿಕರ ಜೋಶ್ ಹಾಗೂ ಶಕಲಕ ಸ್ಟೆಪ್ ನೋಡುಗರನ್ನು ಕೂಡ ಕುಣಿಯುವಂತೆ ಮಾಡಿದೆ. ಆದರೆ ಅನೇಕರು ಸುರಕ್ಷತೆಯ ಆತಂಕ ವ್ಯಕ್ತಪಡಿಸಿದ್ದಾರೆ. ಹರ್ಯಾಣಿ ಗಾಯಕಿ ಸಪ್ನಾ ಚೌಧರಿ ಅವರ ‘ತೆರಿ ಅಖ್ಯಾ ಕಾ ಯೋ ಕಾಜಲ್’ ಹಾಡು ಟೇಪೊಂದರಲ್ಲಿ ಪ್ಲೇ ಆಗುತ್ತಿದ್ದರೆ, ವಿಮಾನದ ಸೀಟಿನಿಂದ ಎದ್ದು ಬಂದ ಪ್ರಯಾಣಿಕರು ಸೀಟಿನ ಮಧ್ಯೆ ಓಡಾಡಲು ಇರುವ ಖಾಲಿ ಜಾಗದಲ್ಲಿ ನಿಂತುಕೊಂಡು ಬಿಂದಾಸ್ ಸ್ಟೆಪ್ ಹಾಕಿದ್ದಾರೆ.
ಈ ವಿಡಿಯೋವನ್ನು ಆಂಕರ್ ಜೆಕೆ (Anchor JK (Jay Karmani) ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಪ್ನಾ ಚೌಧರಿ (Sapna Chudhari) ಹಾಡು 37 ಸಾವಿರ ಅಡಿ ಎತ್ತರದಲ್ಲಿ ತೇಲಿ ಬಂದಿದ್ದು ಹೀಗೆ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅನೇಕರು ಅದ್ಹೇಗೆ ವಿಮಾನದ ಸಿಬ್ಬಂದಿ ನಿಮಗೆ ಡಾನ್ಸ್ ಮಾಡಲು ಅವಕಾಶ ನೀಡಿದರು? ಇದು ಅಪಾಯಕಾರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇದು ಹೇಗೆ ಸಾಧ್ಯ ವಿದ್ಯಾವಂತ ಅನಾಗರಿಕರು ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ನಾಚಿಕೆಗೇಡಿನ ಘಟನೆ ಹೀಗೆ ನೃತ್ಯ ಮಾಡ್ತಿರಬೇಕಾದ್ರೆ ವಿಮಾನದ ಸಿಬ್ಬಂದಿ ಎಲ್ಲಿ ಹೋಗಿದ್ದರು ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.