ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟಿ ಪವಿತ್ರಾ ಗೌಡ ಜೈಲು ಸೇರಿ ಮೂರು ತಿಂಗಳಾಗಿದೆ. ಇತ್ತ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿಯ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ1 ಆಗಿರುವ ಪವಿತ್ರಾ ಗೌಡ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಜಾಮೀನು ಅರ್ಜಿ ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದೆ. ಇದೀಗ ಇಂದು ಮತ್ತೆ ವಿಚಾರಣೆ ನಡೆಯಲಿದೆ.
ನಿನ್ನೆ (ಆಗಸ್ಟ್ 27) ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ಮಾಡಲಾಗಿದೆ. ಆದರೆ ಬುಧವಾರಕ್ಕೆ (ಆ.28) ವಿಚಾರಣೆ ಮುಂದೂಡಿಕೆ ಆಗಿದೆ. ಇಂದು ಮಧ್ಯಾಹ್ನ 2.45ಕ್ಕೆ ವಿಚಾರಣೆ ನಡೆಯಲಿದೆ. ಪವಿತ್ರಾ ಗೌಡ, ದರ್ಶನ್ ಹಾಗೂ ಸಹಚರರ ಮೇಲೆ ಇರುವುದು ಗಂಭೀರ ಆರೋಪ ಆದ್ದರಿಂದ ಹಲವು ಆಯಾಮದಲ್ಲಿ ತನಿಖೆ ಮಾಡಲಾಗಿದೆ.
ಜಾಮೀನು ಪಡೆಯಲು ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲರಾದ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ವಕೀಲರು ವಾದ ಮಾಡಿದ್ದಾರೆ. ‘ರೇಣುಕಾಸ್ವಾಮಿ ಕಪಾಳಕ್ಕೆ ಪವಿತ್ರಾ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಆಕೆ ಕೊಲೆಯ ಒಳಸಂಚಿನ ಭಾಗ ಎನ್ನಲಾಗುವುದಿಲ್ಲ. ಸಂಪೂರ್ಣ ಕೇಸನ್ನು ಆರೋಪಿಗಳ ಸ್ವಇಚ್ಛಾ ಹೇಳಿಕೆ ಆಧರಿಸಲಾಗಿದೆ. ಯಾವುದೇ ಪ್ರತ್ಯಕ್ಷದರ್ಶಿ ಹೇಳಿಕೆ ದಾಖಲಾಗಿಲ್ಲ. ಕೊಲೆಯ ಸಂಚೇ ಅಥವಾ ಆಕಸ್ಮಿಕ ಸಾವೇ ಎಂಬುದು ನಂತರ ತಿಳಿಯಬೇಕಿದೆ. ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಮಹಿಳೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಬೇಕು’ ಎಂದು ವಕೀಲರು ಮನವಿ ಮಾಡಿದ್ದಾರೆ.