ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ ದಂಡ ವಿಧಿಸುವ ನಿಯಮವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.
2022ರ ಮಾರ್ಚ್ 31ರವರೆಗೆ ಉಚಿತವಾಗಿ ಆಧಾರ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಬಹುದಿತ್ತು. 2022ರ ಏಪ್ರಿಲ್ 1 ರಿಂದ 500 ರೂ. ವಿಳಂಬ ಶುಲ್ಕ ವಸೂಲಿ ಮಾಡಲು ನಿರ್ಧರಿಸಲಾಗಿತ್ತು. ನಂತರ ಜುಲೈ 1 ರಿಂದ ಈ ವಿಳಂಬ ಶುಲ್ಕವನ್ನು 1 ಸಾವಿರ ರೂ.ಗೆ ಏರಿಕೆ ಮಾಡಲಾಗಿತ್ತು. ಇಷ್ಟೆಲ್ಲಾ ಅವಕಾಶ ಕೊಟ್ಟ ಬಳಿಕವೂ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ 2023ರ ಜೂನ್ 30ರ ಬಳಿಕ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ.
ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸುವ ವೇಳೆ ಈ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲೇ ಬೇಕು. ಇದಕ್ಕಾಗಿ ನಾವು ಬಹಳಷ್ಟು ಕಾಲಾವಕಾಶ ನೀಡಿದ್ದೇವೆ. ಈಗಲಾದರೂ ಲಿಂಕ್ ಮಾಡಲೇಬೇಕಿದೆ ಎಂದು ಹೇಳಿದ್ದಾರೆ. ಜೊತೆಗೆ ಆಧಾರ್ – ಪಾನ್ ಲಿಂಕ್ಗೆ ನೀಡಲಾಗಿದ್ದ ಡೆಡ್ಲೈನ್ ಮುಗಿದ ಕಾರಣ ದಂಡದ ಮೊತ್ತವನ್ನು ಏರಿಕೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.
ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದ ಪಕ್ಷದಲ್ಲಿ ಹಲವು ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಮೂಲದಲ್ಲೇ ತೆರಿಗೆ ಕಡಿತ ಹಾಗೂ ಮೂಲದಲ್ಲೇ ತೆರಿಗೆ ಸಂಗ್ರಹದಂಥಾ ನಿಯಮಗಳು ಜಾರಿಗೆ ಬರಲಿವೆ ಎಂದು ಮಾರ್ಚ್ 28 ರಂದು ಹಣಕಾಸು ಸಚಿವ ಹೊರಡಿಸಿದ್ದ ಪ್ರಕಟಣೆಯಲ್ಲಿ ವಿವರಿಸಲಾಗಿತ್ತು.
2017ರ ಜುಲೈ 1 ರ ಒಳಗೆ ಪಾನ್ ಕಾರ್ಡ್ ಪಡೆದಿರುವ ಎಲ್ಲರೂ ಆಧಾರ್ ಜೊತೆ ಲಿಂಕ್ ಮಾಡಬೇಕು ಎಂದು ಸರ್ಕಾರ ಹೇಳಿತ್ತು. ಆದಾಯ ತೆರಿಗೆ ಕಾಯ್ದೆ 1961ರ ಅಡಿ ಸರ್ಕಾರ ಈ ನಿಯಮ ರೂಪಿಸಿತ್ತು. 2023 ಮಾರ್ಚ್ 3ರ ಒಳಗೆ ದಂಡದ ಸಮೇತ ಲಿಂಕ್ ಮಾಡಬೇಕೆಂದು ಅವಕಾಶ ನೀಡಲಾಗಿತ್ತು. ಲಿಂಕ್ ಮಾಡದೇ ಇದ್ದರೆ ಏಪ್ರಿಲ್ 1 ರಿಂದ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿತ್ತು. ಆ ನಂತರ ಈ ಡೆಡ್ಲೈನ್ ಅನ್ನು ಜೂನ್ 30, 2023ಕ್ಕೆ ವಿಸ್ತರಣೆ ಮಾಡಲಾಗಿತ್ತು.