ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಆದಮೇಲೆ ವಾಹನಗಳ ಮೇಲೆ ಆಕ್ಷೇಪಾರ್ಹ, ಪ್ರಚೋದನಾಕಾರಿ, ಬೇರೆ ನಟರ ಅಭಿಮಾನಿಗಳ ವಿರುದ್ಧ ಟಾಂಗ್ ಕೊಡುವಂತೆ ಸ್ಟಿಕ್ಕರ್, ಬರಹಗಳ ಅಳವಡಿಕೆ ಮಾಡುವುದು ಹೆಚ್ಚಾಗಿದೆ. ಇದು ಆರ್ಟಿಒ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಅನವಶ್ಯಕ, ಪ್ರಚೋದನಾಕಾರಿ ಬರಹಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಈವರೆಗೆ ನಂಬರ್ ಪ್ಲೇಟ್ ಮೇಲೆ ಮಾತ್ರ ಬರಹ, ಸ್ಟಿಕ್ಕರ್ ಇದ್ದರೆ ಗಮನಿಸುತ್ತಿದ್ದೆವು. ಇನ್ನುಮುಂದೆ ವಾಹನಗಳ ಇತರ ಭಾಗಗಳಲ್ಲಿ ಕೂಡ ಅನಧಿಕೃತ ಬರಹ ಹಾಕಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆರ್ ಟಿಒ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಮಾತನ್ನ ಉಲ್ಲಂಘಿಸಿ ಸ್ಟಿಕ್ಕರ್, ಬರಹ ಅಂಟಿಸಿದಲ್ಲಿ ಮೊದಲ ಬಾರಿಗೆ 500 ರೂಪಾಯಿ, ಎರಡನೇ ಬಾರಿ 1000 ರೂಪಾಯಿ, ಮೂರನೇ ಬಾರಿ ಅದೇ ತಪ್ಪು ಮಾಡಿದರೆ ಪರವಾನಗಿಯನ್ನೇ ರದ್ದು ಮಾಡುತ್ತೇವೆ ಎಂದು ಆರ್ಟಿಒ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಆರ್ಟಿಒ ಅಡಿಷನಲ್ ಕಮಿಷನರ್ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.
ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಆರ್ಟಿಒ ಇಲಾಖೆಗಳಿಗೆ ನಿರ್ದೇಶನ ಕೊಡುತ್ತಾ ಬಂದಿದೆ. ಅದರ ಅನ್ವಯ ಆರ್ಟಿಒ ಅಧಿಕಾರಿಗಳು ಕೇಸುಗಳನ್ನ ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್ಟಿಒ ಮಾಡುತ್ತಿದೆ. ಜೊತೆಗೆ 3 ವರ್ಷದಲ್ಲಿ ಹಲವು ಪ್ರಕರಣ ದಾಖಲು ಮಾಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.