ಬೆಂಗಳೂರು: ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಎಲ್ಲರೂ ಸಮಾನರು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಸಂಬಂಧಿ ಸಿದಂತೆ ಎಫ್ಐಆರ್ ದಾಖಲು ಆಗಿರುವುದನ್ನು ಗಮನಿಸಿದ್ದೇನೆ. ಈಗಾಗಲೇ ಇದರ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಅವರೂ ಮಾತನಾಡಿದ್ದಾರೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಎಲ್ಲರೂ ಸಮಾನರು, ಸರ್ಕಾರ ಎಸ್ಐಟಿ ರಚಿಸಿದೆ, ಕಾನೂನು ಪ್ರಕಾರ ಸರ್ಕಾರ ಕ್ರಮ ವಹಿಸಲಿದೆ, ಕುಮಾರಸ್ವಾಮಿ ನಿಲುವೇ ನಮ್ಮ ನಿಲುವಾಗಿದೆ ಎಂದರು.
ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಬೇಕು ಅನ್ನೋ ಡಿ.ಕೆ.ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲ, ರಕ್ಷಣೆ ಕೊಡಲಿ ಹುಬ್ಬಳ್ಳಿ ನೇಹಾ ಪ್ರಕರಣ ನಡೆದಿದೆ, ಅಂಥವರಿಗೂ ರಕ್ಷಣೆ ಕೊಡಬೇಕು, ಇವರಿಗೂ ರಕ್ಷಣೆ ಕೊಡಲಿ ಎಲ್ಲರಿಗೂ ಸರ್ಕಾರ ರಕ್ಷಣೆ ಕೊಡಲಿ ಎಂದು ಹೇಳಿದರು.
ಹೆಚ್ಚು ಬರ ಪರಿಹಾರ ಕೋರಿ ರಾಜ್ಯ ಸರ್ಕಾರ ಕೋರ್ಟ್ಗೆ ಮೊರೆ ಹೋಗುವ ನಿರ್ಧಾರ ಮಾಡಿದೆ, ನಾನೂ ಕೂಡಾ ಅವರಿಗೆ ಇದನ್ನೇ ಆಗ್ರಹ ಮಾಡುತ್ತೇನೆ. ಸರ್ಕಾರ ಕೋರ್ಟಿನಲ್ಲಿ ಹೆಚ್ಚು ಪರಿಹಾರ ಕೊಡುವಂತೆ ಕೇಳಲಿ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಲಿ. ಕಳೆದ ಹತ್ತು ವರ್ಷಗಳಲ್ಲಿ ಎನ್ಡಿಎ ಅವಧಿಯಲ್ಲಿ ಎಷ್ಟು ಬರ ಪರಿಹಾರ ಬಂದಿದೆ,
ಯುಪಿಎ ಅವಧಿಯಲ್ಲಿ ಎಷ್ಟು ಬಂದಿದೆ ಹೇಳಲಿ, ಈ ವಿಚಾರ ಕೇಳಿದರೆ ಇದರ ಬಗ್ಗೆ ಅವರು ಮಾತೇ ಆಡ್ತಿಲ್ಲ. ಅವರಿಗೆ ಬರ ಪರಿಹಾರ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ. ಕೋರ್ಟಿಗೆ ಹೋಗಲಿ, ಕೋರ್ಟಿನಲ್ಲಿ ಯಾರೆಷ್ಟು ಕೊಟ್ಟಿದ್ದಾರೆ ಅಂತ ಚರ್ಚೆ ಆಗುತ್ತದೆ ಸುಪ್ರೀಂಕೋರ್ಟ್ನಲ್ಲಿ ಸರ್ಕಾರಕ್ಕೆ ಛೀಮಾರಿ ಕಾದಿದೆ ಎಂದು ವಾಗ್ದಾಳಿ ನಡೆಸಿದರು.