ಹುಬ್ಬಳ್ಳಿ : ಮತದಾನದಿಂದ ಯಾರೂ ಕೂಡ ವಂಚಿತರಾಗಬಾರದು. ಜಿಲ್ಲಾ ಸ್ವೀಪ್ ಯೋಜನೆಯಡಿ ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 18 ವರ್ಷ ಪೂರ್ಣಗೊಳ್ಳುವ ಅರ್ಹ ಯುವ ಮತದಾರರು ಮತದಾನ ನಡೆಯುವ 10 ದಿನ ಮುಂಚಿತವಾಗಿ ಸಹ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. 72 ಹುಬ್ಬಳ್ಳಿ-ಧಾರವಾಡ ಪೂರ್ವ(ಪರಿಶಿಷ್ಟ ಜಾತಿ) ವಿಧಾನಸಭಾ ಮತಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು 72 ಹುಬ್ಬಳ್ಳಿ-ಧಾರವಾಡ ಪೂರ್ವ (ಪರಿಶಿಷ್ಟ ಜಾತಿ) ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ವಿನೋದ ಹೆಗ್ಗಳಗಿ ಹೇಳಿದರು.
ಹುಬ್ಬಳ್ಳಿ ಶಹರ ತಹಸೀಲ್ದಾರ ಕಾರ್ಯಾಲಯದಲ್ಲಿ 72 ಮತಕ್ಷೇತ್ರ ವ್ಯಾಪ್ತಿ, ಚುನಾವಣಾ ಸಿದ್ಧತೆ, ಸಿಬ್ಬಂದಿಗಳ ನೇಮಕ, ಅಕ್ರಮ ತಡೆಗೆ ಕೈಗೊಂಡ ಕ್ರಮಗಳು, ಚೆಕ್ ಪೋಸ್ಟ್ ಹಾಗೂ ಇತರ ವಿಷಯಗಳ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದ ವ್ಯಾಪ್ತಿಯಲ್ಲಿ 2,07,577 ಮತದಾರರು ಇದ್ದು, ಅದರಲ್ಲಿ 1,03,295 ಪುರುಷರು, 1,04,268 ಮಹಿಳೆಯರು, 14 ಇತರೆ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ 4080 ಮತದಾರರಿದ್ದಾರೆ. ಅವರಿಗೆ ಮನೆಯಿಂದಲೇ ಮತ ಚಲಾಯಿಸುವ ಒಪ್ಪಿಗೆ ಪತ್ರ 12 ಡಿ ಅರ್ಜಿಯನ್ನು ನೀಡಲಾಗುವುದು. ಅಧಿಕಾರಿಗಳ ತಂಡ ಪೋಸ್ಟಲ್ ಮೂಲಕ ಗೌಪ್ಯ ಮತದಾನವನ್ನು ಮಾಡಿಸಲಿದ್ದಾರೆ. 1621 ವಿಕಲಚೇತನರು ಹಾಗೂ 16 ಸರ್ಕಾರಿ ಸೇವೆಯಲ್ಲಿರುವ ಮತದಾರರಿವರು. ಒಟ್ಟು 211 ಮತಗಟ್ಟೆಗಳಿದ್ದು, ಅದರಲ್ಲಿ 30 ಸೂಕ್ಷö್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಗಬ್ಬೂರು, ಕಾರವಾರ ರಸ್ತೆ ಮತ್ತು ಕುಂದಗೋಳ ರಸ್ತೆಯ ಸೋನಿಯಾಗಾಂಧಿ ನಗರದಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು, ವಾಹನಗಳನ್ನು ತಪಾಸಣೆ ಮಾಡುತ್ತಿವೆ.
ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ವಿವಿಧ ತಂಡಗಳನ್ನು ರಚಿಸಲಾಗಿದೆ. ಎಂಸಿಸಿ ತಂಡ -1, ಸೆಕ್ಟರ್ ಅಧಿಕಾರಿಗಳ ತಂಡ-18, ವಿವಿಟಿ ತಂಡ -1, ವಿಎಸ್ಟಿ ತಂಡ-2, ಲೆಕ್ಕಪತ್ರ ತಂಡ-1, ವೆಚ್ಚ ತಂಡ-1 ಹಾಗೂ ಎಮ್.ಸಿ.ಸಿ ನೋಡಲ್ ಅಧಿಕಾರಿಗಳ ಒಂದು ತಂಡವನ್ನು ರಚನೆ ಮಾಡಲಾಗಿದೆ ಎಂದು ಅವರು ಮಾಹಿತಿ ಒದಗಿಸಿದರು.
ಸಭೆ, ಸಮಾರಂಭ, ಮದುವೆ, ಜಾತ್ರೆ, ರ್ಯಾಲಿ ಸೇರಿದಂತೆ ಇನ್ನಿತರ ಬೃಹತ್ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಿದೆ. ಸು-ವಿದಾ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು. ಅನುಮತಿ ನೀಡುವ ಬಗ್ಗೆ ವಿಧಾನಸಭಾವಾರು ಏಕಗವಾಕ್ಷಿ ವ್ಯವಸ್ಥೆಯನ್ನು ರಚಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 1950, 0836-2358035 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಹುಬ್ಬಳ್ಳಿ ಶಹರ ತಹಸೀಲ್ದಾರ ಹಾಗೂ ಪೂರ್ವ ಸಹಾಯಕ ಚುನಾವಣೆ ಅಧಿಕಾರಿ ಕಲಗೌಡ ಪಾಟೀಲ್ ಸುದ್ದಿಗೋಷ್ಟಿಯಲ್ಲಿದ್ದರು.