ಬೆಂಗಳೂರು: ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಪರವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಅನೇಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಆದರೆ ನಮಗೆ ಅವಕಾಶ ಕೊಡಲು ಸಾಧ್ಯವಾಗುತ್ತಿಲ್ಲ. ಕಷ್ಟ ಕಾಲದಲ್ಲಿ ಪಕ್ಷದ ಜತೆಗಿದ್ದ ಯೋಗೀಶ್ ಬಾಬು ಬಗ್ಗೆ ಗಮನದಲ್ಲಿದೆ ಎಂದರು. ಶಿವಲಿಂಗೇಗೌಡರು ರಾಜಿನಾಮೆ ಕೊಟ್ಟಿದ್ದು, ಪಕ್ಷಕ್ಕೆ ಸೇರಿಸಿಕೊಳ್ಳಲು ಕೋರಿದ್ದಾರೆ. ಅವರಿಗೆ ಅರ್ಜಿ ಹಾಕಲು ಹೇಳಿದ್ದೇವೆ. ಭ್ರಷ್ಟಾಚಾರ ಬೆಲೆ ಏರಿಕೆ ವಿರುದ್ಧ ಜನರು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟಣ್ಣ, ಬಾಬುರಾವ್ ಚಿಂಚನಸೂರು, ಎನ್ವೈ ಹನುಮಂತಪ್ಪ ದಡ್ಡರಲ್ಲ. ಬದಲಾವಣೆಗೆ ಜನ ತೀರ್ಮಾನ ಮಾಡಿದ್ದಾರೆ.
ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಉಪಯೋಗವಾಗುತ್ತಿಲ್ಲ ಎಂಬುದು ಅರಿವಿಗೆ ಬಂದಿದೆ ಎಂದರು. ಇದೇ ವೇಳೆ ಸಾತನೂರಿನಲ್ಲಿ ಕಸಾಯಿಖಾನೆಗೆ ಹಸು ಸಾಗಾಣಿಕೆ ವೇಳೆ ವ್ಯಕ್ತಿ ಸಾವು ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಕ್ಷೇತ್ರದಲ್ಲಿ ನೈತಿಕ ಪೊಲೀಸ್ ಗಿರಿಗೆ ಒಂದು ಬಲಿಯಾಗಿದೆ. ಎಫ್ಐಆರ್ ದಾಖಲಾಗಿದ್ದು, ಬಿಜೆಪಿ ಜತೆ ಲಿಂಕ್ ಇರುವವರ ಮೇಲೆ ಪ್ರಕರಣ ದಾಖಲಾಗಿದೆ. ನೈತಿಕ ಪೊಲೀಸ್ ಗಿರಿಗೆ ಸಿಎಂ, ಗೃಹ ಸಚಿವರು ಹೊಣೆ ಹೊರಬೇಕು. ಗೃಹ ಸಚಿವರು ರಾಜೀನಾಮೆ ಕೊಡಲಿ. ಮೃತ ಕುಟುಂಬದವರಿಗೆ ಸರ್ಕಾರ ಕೂಡಲೇ 25 ಲಕ್ಷ ರೂ. ಪರಿಹಾರ ಕೊಡಬೇಕು. ತಪ್ಪಿತಸ್ಥರನ್ನು ಬಂಧಿಸಬೇಕು. ನೈತಿಕ ಪೊಲೀಸ್ ಗಿರಿ ಬಗ್ಗೆ ಬೊಮ್ಮಾಯಿಯವರ ಹಿಂದಿನ ಹೇಳಿಕೆಯನ್ನು ನೆನಪು ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.