ಬೆಂಗಳೂರು: ಕಳೆದ ಕೆಲ ದಿನಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ತರಕಾರಿ ಬೆಲೆ, ಬೇಳೆಕಾಳಿನ ಬೆಲೆ ನಂತರ ಇದೀಗ ಹೂವುಗಳ (Flower) ಸರದಿ ಶುರುವಾಗಿದೆ. ಹೂಗಳ ಬೆಲೆ ದುಬಾರಿಯಾಗಿದ್ದು (Flower Price Hike), ಹೂಗಳನ್ನು ಕೊಳ್ಳಂಗಿಲ್ಲ.. ಮುಡಿಯೋ ಹಾಗಿಲ್ಲ.. ಅನ್ನುವಂತಾಗಿದೆ.
ಈ ಬಾರಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಮುಂಗಾರು ಕೈಕೊಟ್ಟಿದ್ದು, ಮಳೆಯಿಂದಾಗಿ ತರಕಾರಿಗಳ ಬೆಲೆಗಳು ದುಬಾರಿಯಾಗಿವೆ. ಈ ಬೆನ್ನಲ್ಲೇ ಹೂಗಳ ಬೆಲೆ ಗಗನಕ್ಕೇರುತ್ತಿದೆ. ಮುಂಗಾರು ಮಳೆ (Rain) ಕೊರತೆಯಿಂದ ಹೂವಿನ ಫಸಲಿನಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಹೀಗಾಗಿ ಹೂಗಳ ದರವೂ ಏರಿಕೆಯಾಗಿದ್ದು. ಮಾರ್ಕೆಟ್ನಲ್ಲಿಯೂ ಹೂವುಗಳು ಸಿಗುತ್ತಿಲ್ಲ. ಸಾಮಾನ್ಯವಾಗಿ ಆಷಾಢದಲ್ಲಿ ಶುಭ ಸಮಾರಂಭಗಳು ಕಡಿಮೆ ಇರೋದ್ರಿಂದ ಹೂಗಳು ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು. ಆದ್ರೆ ಈ ಬಾರಿ ಮಳೆಯಿಂದಾಗಿ ಹೂಗಳ ಬೆಲೆ ಡಬಲ್ ಆಗಿದೆ.
ಯಾವ ಹೂವಿನ ದರ ಎಷ್ಟು..? (ಪ್ರತಿ ಕೆಜಿಗಳಿಗೆ)
ಸದ್ಯ ಮಾರುಕಟ್ಟೆಯಲ್ಲಿ ಮಲ್ಲಿಗೆ ಕೆ.ಜಿ 1,200 ರೂ., ಕನಕಾಂಬರಿ 2,000 ರೂ., ಸೇವಂತಿಗೆ 400 ರೂ., ಚೆಂಡು ಹೂವು, 200 ರೂ., ಸುಗಂಧರಾಜ 200 ರೂ., ಮಲ್ಲಿಗೆ ಹಾರ (ಒಂದು ಜೊತೆ) 800 ರೂ. ನಿಂದ 1,000 ರೂ.ಗಳಿಗೆ ಮಾರಾಟವಾಗ್ತಿದೆ.
ಒಂದೆಡೆ ಮಳೆ ಕೊರತೆ ಮತ್ತೊಂದೆಡೆ ಬಿಸಿಲ ತಾಪದಿಂದ ಹೂವಿನ ಫಸಲಿನಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ದಿನನಿತ್ಯದ ಪೂಜೆಗೂ ಹೂ ಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಸಾಲು ಹಬ್ಬಗಳು ಬರುವುದರಿಂದ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ ಗ್ರಾಹಕರು.