ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಾರ್ಚ್ 21ರಂದು ಕೆಎಸ್ಆರ್ಟಿಸಿ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ಯುಗಾದಿ ಹಬ್ಬಕ್ಕೆ ಬೆಂಗಳೂರಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವವರಿಗೆ ಸಂಕಷ್ಟ ಎದುರಾಗಲಿದೆ.
2023ರ ಮಾರ್ಚ್ 8ರಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಜೊತೆ ವೇತನ ಪರಿಷ್ಕರಣೆ ಕುರಿತು ಚರ್ಚಿಸಲಾಗಿದೆ. ಆದರೆ ಮೂಲ ವೇತನದ ಶೇ.10 ರಷ್ಟು ಹೆಚ್ಚಳದ ಭರವಸೆಗೆ ನಮ್ಮ ಸಮ್ಮತಿ ಇಲ್ಲದ ಕಾರಣ ಮತ್ತೊಮ್ಮೆ ಸಭೆ ನಡೆಸುವ ಆಶ್ವಾಸನ ನೀಡಲಾಗಿತ್ತು.
ಆದರೆ ಸರ್ಕಾರ ನಮ್ಮ ಬೇಡಿಕೆಗಳ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಲಕ್ಷಣಗಳ ಕಾಣುತ್ತಿಲ್ಲ. ಅಲ್ಲದೆ ಚುನಾವಣೆ ಆರಂಭದ ಹೊಸ್ತಿಲಿನಲ್ಲಿದ್ದೇವೆ. ಚುನಾವಣಾ ಆಯುಕ್ತರು ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಚುನಾವಣೆಯ ಪ್ರಕಟಣೆಯಾದರೆ ಸಾರಿಗೆ ನೌಕರರು ತಮ್ಮ ಬೇಡಿಕೆಗಳೆಲ್ಲಾ ಅನಿರ್ಧಿಷ್ಟವಾಧಿಗೆ ನೆನೆಗುದಿಗೆ ಬೀಳಬಹುದೆಂಬ ಭೀತಿಯಲ್ಲಿದ್ದಾರೆ. ಈಗಾಗಲೇ ಹಿಂದಿನ ವೇತನ ಹೆಚ್ಚಳದ ಅವಧಿಯ 39 ತಿಂಗಳುಗಳು ಕಳೆದಿದೆ. ಅಷ್ಟೆ ಅಲ್ಲದೆ ಬೆಲೆ ಏರಿಕೆಯಿಂದಲೂ ನೌಕರರು ತತ್ತರಿಸುತ್ತಿದ್ದಾರೆ. ಇವುಗಳ ಬಗ್ಗೆ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.