ಮುಂಬೈ: ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಮಹಾ ವಿಕಾಸ್ ಅಘಾಡಿ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಎಂವಿಎ ಮೈತ್ರಿ ಕೂಟ ಬೆಂಬಲಿಸಿದ್ದಕ್ಕಾಗಿ ಮಹಾರಾಷ್ಟ್ರ ಜನತೆಗೆ ಧನ್ಯವಾದ ಅರ್ಪಿಸಿದರು. ಜೊತೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸುವ ಸುಳಿವು ನೀಡಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಜಂಟಿಯಾಗಿ ವಾಗ್ದಾಳಿ ನಡೆಸಿದರು. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, 2022ರಲ್ಲಿ ತಮ್ಮ ಪಕ್ಷವನ್ನು ತೊರೆದು ಏಕನಾಥ್ ಶಿಂಧೆ ನೇತೃತ್ವದ ಪಾಳಯ ಸೇರಿ ಶಿವಸೇನೆ ಸರ್ಕಾರದ ವಿಭಜನೆಗೆ ಕಾರಣವಾದ ಶಾಸಕರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳುವುದಿಲ್ಲ.
ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ವಿಧಾನ ಸಭೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತದೆ. ಬಿಜೆಪಿ ಎಷ್ಟು ಪೊಳ್ಳು ಎಂಬುದನ್ನು ರಾಜ್ಯದ ಜನರು ತೋರಿಸಿದ್ದಾರೆ. ಲೋಕಸಭಾ ಚುನಾವಣೆಯಿಂದ ಪ್ರಾರಂಭವಾಗಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಟದ ಗೆಲುವು ಮುಂಬರುವ ಚುನಾವಣೆಗಳಲ್ಲೂ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.