ಒಡಿಶಾ: ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಇಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗುತ್ತಲೇ ಇದೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಇಲ್ಲಿ ಉತ್ತಮ ಬೆಳವಣಿಗೆಗಳು ಆಗುತ್ತನೇ ಇರುತ್ತವೆ. ಅದರ ಜೊತೆಯಲ್ಲೇ ಮೂಢನಂಬಿಕೆಗಳೂ ಇಲ್ಲಿ ಕಡಿಮೆಯೇನಿಲ್ಲ. ಆಚರಣೆಯ ಹೆಸರಲ್ಲಿ ಅರ್ಥಹೀನ ಪದ್ಧತಿಗಳನ್ನು ಅನುಸರಿಸಲಾಗುತ್ತೆ. ಹಳೆಯ ಸಂಪ್ರದಾಯಗಳನ್ನು ಮುಂದುವರಿಸಲಾಗುತ್ತೆ. ಕೆಲವೊಂದು ಮೂರ್ಖತನದ ಪರಮಾವಧಿ ಅಂತನಿಸಿದ್ರೂ ಜನರು ಇಂಥಾ ಆಚರಣೆಗಳು ಮಾತ್ರ ಬಿಟ್ಟು ಬಿಡೋದಿಲ್ಲ. ಅರ್ಥಹೀನ ಸಂಪ್ರದಾಯಗಳ ಜೊತೆ ಬದುಕುತ್ತಲೇ ಇರುತ್ತಾರೆ. ಹಾಗೆಯೇ ಒಡಿಶಾದಲ್ಲೊಂದು ವಿಚಿತ್ರ ಆಚರಣೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಒಡಿಶಾದ ಬಾಲಸೋರ್ ಎಂಬಲ್ಲಿ ಮಕ್ಕಳಿಗೆ ನಾಯಿಗಳ ಜೊತೆ ಮದುವೆ (Marriage) ಮಾಡಲಾಗ್ತಿದೆ. ಇದು ದುಷ್ಟಶಕ್ತಿ (Evil spirit)ಗಳನ್ನು ದೂರ ಮಾಡುತ್ತದೆ ಎಂಬ ಸ್ಥಳೀಯ ಮೂಢನಂಬಿಕೆಗೆ ಅನುಗುಣವಾಗಿ ಈ ಮದುವೆಯನ್ನು ನಡೆಸಿಕೊಂಡು ಬರಲಾಗ್ತಿದೆ. ಬಾಲಸೋರ್ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳನ್ನು ‘ದುಷ್ಟಶಕ್ತಿಗಳನ್ನು ದೂರವಿಡುವ’ ಸಲುವಾಗಿ ಬೀದಿನಾಯಿ (Street dog)ಗಳೊಂದಿಗೆ ಮದುವೆ ಮಾಡಲಾಗಿದೆ. 11 ವರ್ಷದ ಬಾಲಕ ತಪನ್ ಸಿಂಗ್ ಹೆಣ್ಣು ನಾಯಿಯನ್ನು ಮದುವೆಯಾಗಿದ್ದರೆ, ಏಳು ವರ್ಷದ ಲಕ್ಷ್ಮಿ ಗಂಡು ನಾಯಿಯೊಂದಿಗೆ ಮದುವೆಯಾದಳು.
ಸೊರೊ ಬ್ಲಾಕ್ನ ಬಂಧ್ಸಾಹಿ ಗ್ರಾಮದ ಹೋ ಬುಡಕಟ್ಟು ಜನಾಂಗದವರಾದ ಸಿಂಗ್ಗಳಲ್ಲಿ ಸಣ್ಣ ಮಕ್ಕಳ ದವಡೆಯಲ್ಲಿ ಮೇಲಿನ ಹಲ್ಲು ಮೊದಲು ಹುಟ್ಟಿದರೆ ಅದು ಅಶುಭವೆಂದು ನಂಬಲಾಗುತ್ತದೆ. ಹೀಗಾದರೆ ಮಕ್ಕಳಿಗೆ ಕೆಡುಕುಗಳು ಆಗುತ್ತವೆ ಎನ್ನುವುದನ್ನು ಈ ಬುಡಕಟ್ಟ ಜನಾಂಗದ ನಂಬಿಕೆ. ಹೀಗಾಗಿ ಮಕ್ಕಳಿಗೆ ಸಂಭವಿಸಬಹುದಾದ ಅಪಾಯವನು ಹೋಗಲಾಡಿಸಲು ನಾಯಿಯೊಂದಿಗೆ ಮದುವೆ ಮಾಡುತ್ತಾರೆ. ಸಮುದಾಯದ ಹಬ್ಬದ ಜೊತೆಗೆ ಆಚರಣೆಗಳು ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ರವರೆಗೆ ಮುಂದುವರೆಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮದುವೆ ಶಾಸ್ತ್ರೋಕ್ತವಾಗಿ ನಡೆದ ನಂತರ ಸಂಭವಿಸಬಹುದಾದ ದುರಂತ ನಾಯಿಗಳಿಗೆ ವರ್ಗಾವಣೆಯಾಗುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ. ಹೀಗಾಗಿ ಜನರಿಂದ ದುಷ್ಟಶಕ್ತಿ ದೂರವಾಯಿತು ಎಂದು ಖುಷಿಪಡುತ್ತಾರೆ. ಈ ಮದುವೆ ಆಚರಣೆ ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ. ಬದಲಿಗೆ ವರ್ಷಗಳಿಂದಲೂ ಹಿರಿಯರು ಆಚರಿಸಿಕೊಂಡು ಬಂದಿರುವ ಕಾರಣ (Reason) ಮೂಢನಂಬಿಕೆಯಾಗಿ ಮುಂದುವರೆದಿದೆ ಎಂದು ತಿಳಿದುಬಂದಿದೆ.