ಮಂಡ್ಯ:- ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮತದಾರರಿಗೆ ಉಚಿತ ಘೋಷಣೆ ನೀಡುವುದಲ್ಲ ಜನರಿಗೆ ಸ್ವಾವಲಂಭಿ ಜೀವನ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಕೈ , ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು. ಮದ್ದೂರು ಪಟ್ಟಣದ ಶ್ರೀ ಸೋಮೇಶ್ವರ ಸಮುದಾಯ ಭವನದಲ್ಲಿ ಬಿಜೆಪಿ ಮಹಿಳಾ ಸಮಾವೇಶದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಸಿದವನಿಗೆ ಮೀನು ಕೊಟ್ಟರೆ ಆ ಒಂದು ದಿನಕ್ಕೆ ಊಟ ಮಾಡುತ್ತಾರೆ. ಆದರೆ ಆ ಹಸಿದ ವ್ಯಕ್ತಿಗೆ ಮೀನು ಹಿಡಿಯುವುದನ್ನು ಕಲಿಸಿ ಕೊಟ್ಟರೆ ತನ್ನ ಇಡೀ ಜೀವನವನ್ನು ಸ್ವಾಭಿಮಾನದಿಂದ ಕಟ್ಟಿಕೊಳ್ಳುತ್ತಾನೆ ಹೀಗಾಗಿ ಸ್ವಾವಲಂಬಿ ಜೀವನ ಮಾಡಲು ದಾರಿ ಮಾಡಿಕೊಡಬೇಕು.
ಅದು ಬಿಟ್ಟು ಎರಡು ಸಾವಿರ ರೂಪಾಯಿಗಳನ್ನು ಕೊಡುವುದು ಅಂದರೆ ಏನರ್ಥ ಎಂದು ಸುಮಲತಾ ಪ್ರಶ್ನಿಸಿದರು. ಆ ದುಡ್ಡನ್ನು ಎಲ್ಲಿಂದ ತರುತ್ತಾರೋ ಗೊತ್ತಿಲ್ಲ. ಆಮೇಲೆ ನೀವು ರಸ್ತೆ ಸರಿ ಇಲ್ಲ, ನೀರು ಬರುತ್ತಿಲ್ಲ ಅಂದರೆ ಎರಡು ಸಾವಿರ ಕೊಟ್ಟಿದ್ದೇವೆ ಅಂತಾರೆ ನಿರುದ್ಯೋಗಿಗಳಿಗೆ ಮೂರು ಸಾವಿರ ಕೊಡುತ್ತೇವೆ ಅಂತಾರೆ. ಈ ಹಿಂದೆ ನೀರಿಗಾಗಿ ಬಹಳ ದೂರ ದೂರ ಹೋಗಬೇಕಿತ್ತು. ಆದರೆ ಈಗ ಜಲ ಜೀವನ್ ಮಿಷನ್ನಿಂದ ಮೋದಿ ಮನೆ ಮನೆಗೂ ನೀರು ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರ ನೋಡಿದ್ದೇವೆ. ಜೆಡಿಎಸ್ ಪಕ್ಷದ ಅಧಿಕಾರವನ್ನು ನೋಡಿದ್ದೇವೆ. ಈ ಬಾರಿ ಬಿಜೆಪಿಗೆ ಬೆಂಬಲ ನೀಡಿ ಅಭಿವೃದ್ಧಿಯ ಪರ್ವ ನೋಡಿ ಎಂದು ಮನವಿ ಮಾಡಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದೆ. ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯ ನೀಡಿದ್ದು ಕೂಡ ಇದೇ ಮೋದಿ ಸರಕಾರ. ಆಶಾ ಕಾರ್ಯಕರ್ತರಿಗೆ 6 ಸಾವಿರ ಇತ್ತು. ಅದನ್ನು ಕೋವಿಡ್ ಸಂದರ್ಭದಲ್ಲಿ ಶೇ 50ರಷ್ಟು ಹೆಚ್ಚಳ ಮಾಡಿದ್ದಾರೆ. ಗರ್ಭಿಣಿ ಮಹಿಳೆಯರಿಗೆ ಉಚಿತ ಸ್ಕ್ಯಾನ್, ತಾಯಿ -ಮಗು ಆರೋಗ್ಯ ಪರೀಕ್ಷೆ, ಮಗುವಿನ ತಾಯಿ ಅರೋಗ್ಯ ಏರುಪೇರು ಆಗದಂತೆ ಪೌಷ್ಟಿಕ ಆಹಾರ ಇತ್ಯಾದಿಗಳನ್ನು ನೀಡಲಾಗುತ್ತಿದೆ ಎಂದರು.
ಮದ್ದೂರಿಗೆ ಬಂದಾಗ ಸಂಸದೆ ಅನ್ನೋದಕ್ಕಿಂತ ಇಲ್ಲಿನ ಸೊಸೆ ಅಂತ ಅನಿಸುತ್ತದೆ. ಮತದಾರರು ಅಂತಲ್ಲ, ಇದು ನನ್ನ ಸಂಬಂಧ, ಅಧಿಕಾರ, ಆತ್ಮೀಯತೆ. ಇಲ್ಲಿ ಹತ್ತಾರು ವರ್ಷಗಳಿಂದ ಎರಡೇ ಎರಡು ಪಕ್ಷಕ್ಕೆ ಗೆಲ್ಲಿಸಿ ಏನು ಪಡೆದಿದ್ದೇವೆ. ಅದಕ್ಕಿಂತ ಮೊದಲು ವೈಯಕ್ತಿಕ ನನಗೆ ಅನುಭವ ಹೇಳುತ್ತೇನೆ. ನನಗಾಗಿರುವ ನೋವು ಅಷ್ಟಾಗಿ ಹೇಳಿಲ್ಲ. ನಾಲ್ಕು ವರ್ಷಗಳ ಹಿಂದೆ ಅಂಬರೀಶ್ ಅವರು ನಿಧನರಾದ ನಂತರ ನಡೆದ ವಿಷಯ ನಿಮಗೆಲ್ಲಾ ಗೊತ್ತಿದೆ. ಅಂಬರೀಶ್ ಕಾಲವಾಗಿ ಎರಡು ತಿಂಗಳು ಆಗಿರಲಿಲ್ಲ. ನಮಗೆ ಅವಮಾನಗಳಾದವು ಎಂದರು.
ಗುರು ಎಂಬ ಸೈನಿಕ ಹುತಾತ್ಮನಾದಾಗ ನಾನು ಇಲ್ಲಿ ಬಂದಿದ್ದೆ. ಆಗ ನಾನು ಚುನಾವಣೆಗೆ ನಿಂತಿರಲಿಲ್ಲ. ಆಗ ಆ ಹುತಾತ್ಮ ಸೈನಿಕನಿಗೆ ಅಂತಿಮ ಸಂಸ್ಕಾರ ಮಾಡಲೂ ಸರಕಾರ ಮುಂದೆ ಬರಲಿಲ್ಲ. ಆಗ ಯಾರ ಸರ್ಕಾರ ಇತ್ತು ಗೊತ್ತಲ್ಲ, ಆಗ ನೆರವಿಗೆ ಬಂದಿದ್ದು ಅಂಬರೀಶ್ ಕುಟುಂಬ. ಹುತಾತ್ಮ ಸೈನಿಕರ ಗುರು ಅವರ ಕುಟುಂಬಕ್ಕೆ ಅರ್ಧ ಎಕರೆ ಜಾಗ ಕೊಟ್ಟಿದ್ದೇವೆ. ನಾನು ಸಂಸದೆಯಾದ ನಂತರ ನಾನು ಕಾಮಗಾರಿಗಳ ಗುದ್ದಲಿ ಪೂಜೆ ಮಾಡುವುದಕ್ಕೂ, ಹೆಸರಿಡಲು ಮುಂದಾದಾಗ ಬಹಳ ಕಾಟ ಕೊಟ್ಟಿದ್ದಾರೆ.
ಅಲ್ಲಿ ಮಹಿಳೆಯರಿಗೆ ಗೌರವ ಇಲ್ಲ. ಬರೀ ಒಂದೇ ಒಂದು ಕುಟುಂಬ ಬೆಳೆಸುವುದನ್ನು ಬಿಡಬೇಕು ಎನ್ನುವ ಮೂಲಕ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿ ಈ ಬಾರಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ, ಮದ್ದೂರು ಕ್ಷೇತ್ರದ ಉಸ್ತುವಾರಿ ಭರತ್ ಭೂಷಣ್, ಜಿ.ಪಂ ಮಾಜಿ ಅಧ್ಯಕ್ಷೆ ನಾಗರತ್ನ ಸ್ವಾಮಿ, ಮಂಡಲ ಅಧ್ಯಕ್ಷ ಶಿವದಾಸ್ ಸತೀಶ್, ಜಿ.ಪಂ ಮಾಜಿ ಸದಸ್ಯರಾದ ಸಾದೊಳಲು ಕೃಷ್ಣೇಗೌಡ, ಬೋರಯ್ಯ, ಮುಖಂಡರಾದ ಚಿಕ್ಕಮರಿಯಪ್ಪ, ಮೋಹನ್, ಮಧು ಮತ್ತಿತರರು ಉಪಸ್ಥಿತರಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ.