ನವದೆಹಲಿ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ರಾಜಸ್ಥಾನದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುವುದಿಲ್ಲ ಎಂಬ ಕಾನೂನನ್ನು ಸುಪ್ರೀಂ ಕೋರ್ಟ್ (Supreme Court) ಅನುಮೋದಿಸಿದೆ. ರಾಜ್ಯದ 1989 ರ ಕಾನೂನು ಇದಾಗಿದೆ. ಈ ಕಾನೂನಿಗೆ ಸುಪ್ರೀಂ ಕೋರ್ಟ್ನ ಅನುಮೋದನೆಯ ಮುದ್ರೆ ಸಿಕ್ಕಿದೆ. ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ನಿಯಮವು ತಾರತಮ್ಯರಹಿತವಾಗಿದೆ ಎಂದು ತಿಳಿಸಿದೆ.
ಇದು ನೀತಿಯ ವ್ಯಾಪ್ತಿಗೆ ಬರುತ್ತದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು ಫೆಬ್ರವರಿ 20 ರಂದು ಆದೇಶದಲ್ಲಿ ತಿಳಿಸಿದೆ. 2022, ಅಕ್ಟೋಬರ್ 12ರ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ಪೀಠವು ಎತ್ತಿಹಿಡಿದಿದೆ. ಮಾಜಿ ಸೈನಿಕ ರಾಮಜಿ ಲಾಲ್ ಜಾಟ್ ಅವರ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.
2017 ರ ಜನವರಿಯಲ್ಲಿ ರಕ್ಷಣಾ ಸೇವೆಗಳಿಂದ ನಿವೃತ್ತರಾದ ನಂತರ ರಾಮಜಿ ಲಾಲ್, 2018ರ ಮೇ ತಿಂಗಳಲ್ಲಿ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರಿಂದ ಅವರ ಅರ್ಜಿಯನ್ನು ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮಗಳು, 1989 ರ ಅಡಿಯಲ್ಲಿ ತಿರಸ್ಕರಿಸಲಾಯಿತು. ಇದನ್ನು ಪ್ರಶ್ನಿಸಿ ರಾಮಜಿ ಲಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಪಂಚಾಯತ್ ಚುನಾವಣೆಗಳ ಸ್ಪರ್ಧಿಗಳಿಗೆ ಕುಟುಂಬ ಯೋಜನೆಯನ್ನು ಉತ್ತೇಜಿಸಲು ಇದೇ ರೀತಿಯ ನಿಯಮಗಳನ್ನು ಈ ಹಿಂದೆ ಅನುಮೋದಿಸಿತ್ತು ಎಂದು ನ್ಯಾಯಾಲಯ ಸ್ಪಷ್ಟಪಡಿಸಲಾಗಿದೆ.