ಬೆಂಗಳೂರು: ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ, ಟೊಳ್ಳು ಭರವಸೆ ನೀಡುವುದಿಲ್ಲ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ನಾವು 165 ಭರವಸೆಗಳನ್ನು ನೀಡಿ 158 ಭರವಸೆ ಈಡೇರಿಸಿದ್ದೇವೆ. ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಮ್ಮ ಪ್ರಣಾಳಿಕೆ ಜಾರಿ ಮಾಡಲು ಪ್ರಾಮಾಣಿಕತೆ ತೋರಲಿಲ್ಲ.
ಈಗ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ನಮ್ಮ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ 200 ಯುನಿಟ್ ವಿದ್ಯುತ್ ಉಚಿತ, ಯುವನಿ ಮೂಲಕ ಪದವೀಧರರಿಗೆ 3000 ಹಾಗೂ ಡಿಫ್ಲೋಮಾ ಪದವೀಧರರಿಗೆ 1500 ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುವುದು. ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆ ಹಾಗೂ ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ತುಂಬುತ್ತಿಲ್ಲ.
ಹೀಗಾಗಿ ನಿರುದ್ಯೋಗ ಭತ್ಯೆ ನೀಡಲು ತೀರ್ಮಾನಿಸಿದ್ದೇವೆ ಎಂದರು. ನನಗೆ ಬೇರೆ ರಾಜ್ಯಗಳಿಂದ ದೂರವಾಣಿ ಕರೆ ಹಾಗೂ ಪತ್ರಗಳು ಬರುತ್ತಿದ್ದು, ನಿಮ್ಮ ಗ್ಯಾರಂಟಿ ಕಾರ್ಡ್ ಹೆಚ್ಚು ಪರಿಣಾಮಕಾರಿಯಾಗಿವೆ. ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ. ಟೊಳ್ಳು ಭರವಸೆ ನೀಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ, ನಮ್ಮ 150 ಕ್ಷೇತ್ರಗಳ ಗುರಿ ತಲುಪುತ್ತೇವೆ ಎಂದು ಹೇಳಿದ್ದಾರೆ.