ಬೆಂಗಳೂರು: ಲಂಚ ಪ್ರಕರಣಕ್ಕೆ ಸಂಬಂಧಿಸಿ ಚನ್ನಗಿರಿ ಬಿಜೆಪಿ ಶಾಸಕ ಮಾಡಾಲ್ ವಿರೂಪಾಕ್ಷಪ್ಪ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಅವರು, 40% ಭ್ರಷ್ಟಾಚಾರದ ಸಾಕ್ಷಿ ಸಿಕ್ಕರೂ ತಾಕತ್ತು, ಧಮ್ಮು, ಹಮ್ಮು, ಬಿಮ್ಮುಗಳು ಯಾವ ಬಿಲದಲ್ಲಿ ಅಡಗಿ ಕುಳಿತಿವೆ?
ರಾಜ್ಯವನ್ನ ಗುಡಿಸಿ ಗುಂಡಾಂತರ ಮಾಡಿರುವ ಭ್ರಷ್ಟ ಬಿಜೆಪಿ ಸರಕಾರ, ದೇಶದ ಎದುರು ರಾಜ್ಯದ ಮಾನ ಹರಾಜಿಗಿಟ್ಟಿದೆ ಎಂದು ಟೀಕಿಸಿರುವ ಅವರು,
ವಾರಕ್ಕೆ ಎರಡು ಬಾರಿ ಚುನಾವಣಾ ಪ್ರವಾಸಿಗರಾದ ಮೋದಿ ಮತ್ತು ಶಾ ಜೋಡಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ವಸೂಲಾಗಿರುವ payCm ಹಣದ ಪಾಲಿಗಾಗಿಯೇ? ರಾಜ್ಯದ ತೆರಿಗೆಯ ಬೊಕ್ಕಸವನ್ನು ಲೂಟಿ ಮಾಡಿ, ದಿಲ್ಲಿ ಬಿಜೆಪಿಯ ಖಜಾನೆ ಭರ್ತಿ ಮಾಡಿದ ಪಾಪದ ಕೊಡ ತುಂಬಿದೆ ಎಂದು ಹೇಳಿದ್ದಾರೆ. ನಾಚಿಕೆ, ಮಾನ, ಮಾರ್ಯಾದೆ ಸ್ವಾಭಿಮಾನ ಎನ್ನುವ ಪದಗಳಿಗೆ ಕಿಂಚಿತ್ತಾದರೂ ಗೌರವ ಇದ್ದರೆ, ರಾಜ್ಯದ ಜನರಿಗೆ ಕ್ಷಮೆ ಕೇಳಿ, ಪಾಪದ ಪ್ರಾಯಶ್ಚಿತ್ತಕ್ಕೆ ರಾಜೀನಾಮೆ ಕೊಟ್ಟು ತೊಲಗಿ ಎಂದು ಒತ್ತಾಯಿಸಿರುವ ಬಿ.ಕೆ.ಹರಿಪ್ರಸಾದ್, ಘನತೆಯುತ ರಾಜ್ಯಕ್ಕೆ ಕಮಿಷನ್ ರಾಜ್ಯದ ಮಸಿ ಬಳಿದ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಹೇಳಿದ್ದಾರೆ.