ಬೆಂಗಳೂರು: ಕಾಂಗ್ರೆಸ್ ಗೆ ಜನತೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಶಾಸಕ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ (DKS)ಅವರು ನಿನ್ನೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಕೇಸರೀಕರಣದ ವಿರುದ್ಧವೂ ಮಾತನಾಡಿದ್ದಾರೆ. ರಾಷ್ಟ್ರದ ಧ್ಚಜದಲ್ಲಿ ಕೇಸರಿ ಬಣ್ಣ ಇದೆ. ಇಂತಹ ಕೇಸರಿ ಬಗ್ಗೆ ಕಾಂಗ್ರೆಸ್ನವರಿಗೆ ಸಿಟ್ಟು ಯಾಕೆಂದು ಗೊತ್ತಿಲ್ಲ. ಇಡೀ ದೇಶದಲ್ಲೇ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್ನವರು ಇದ್ದಾರೆ. ಇಂತಹ ಭ್ರಮೆಯಲ್ಲಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದು ಶಾಸಕ ವಿಜಯೇಂದ್ರ ಹೇಳಿದರು.
ಇನ್ನೂ ರಾಜ್ಯದ ಮುಖ್ಯಮಂತ್ರಿ ಮುಂದಿನ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತಾರೋ, ಇಲ್ಲವೋ ಎಂಬುದೇ ಗ್ಯಾರಂಟಿ ಇಲ್ಲ ಎಂದು ವ್ಯಂಗ್ಯವಾಡಿದರು. ಸದ್ಯ ಆಡಳಿತಕ್ಕೆ ಬಂದಿರುವುದು ಡಬಲ್ ಸ್ಟೇರಿಂಗ್ ಸರ್ಕಾರ. ಮುಖ್ಯಮಂತ್ರಿಗೊಂದು ಸ್ಟೇರಿಂಗ್, ಉಪಮುಖ್ಯಮಂತ್ರಿಗೊಂದು ಸ್ಟೇರಿಂಗ್ ಇದೆ. ಯಾರು ಯಾವ ಕಡೆ ಸ್ಟೇರಿಂಗ್ ಎಳೆಯುತ್ತಾರೆ ಎಂಬುದೇ ಗೊತ್ತಿಲ್ಲ. ಬಸ್ ಯಾವ ಕಡೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕು. ಒಟ್ಟಿನಲ್ಲಿ ಆ ದೇವರೇ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ಶಾಸಕ ವಿಜಯೇಂದ್ರ ಹೇಳಿದರು.