ಬೆಂಗಳೂರು:- ಅಪರಾಧಗಳ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಯುವಕರೇ ಈ ದೇಶದ ಸಂಪತ್ತು. ಅವರು ಮಾದಕವಸ್ತುಗಳ ವ್ಯಸನಿಗಳಾಗದಂತೆ ಜಾಗೃತಿ ಮೂಡಿಸಲು ಸರ್ಕಾರದ ಜತೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಹಸಿರು ಕಡಿಮೆಯಾಗುತ್ತಿರುವ ಬೆಂಗಳೂರನ್ನು ಪುನಃ ಹಸಿರು ನಗರವನ್ನಾಗಿಸಬೇಕು ಮತ್ತು ಯುವಕರು ಆರೋಗ್ಯವಂತರಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ಪೊಲೀಸ್ ಓಟ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರ ದೈಹಿಕ ಕ್ಷಮತೆಗಾಗಿ ಓಟ ಅಗತ್ಯವಿದೆ. ವಿಶೇಷವಾಗಿ ಯುವಕರು ಸಮಾಜದಲ್ಲಿ ಅರ್ಧ ಸಂಖ್ಯೆಯಲ್ಲಿದ್ದಾರೆ. ಎಷ್ಟು ವರ್ಷ ಬದುಕುತ್ತೇವೆಯೋ ಅಷ್ಟು ವರ್ಷವೂ ಆರೋಗ್ಯವಂತರಾಗಿ ಜೀವಿಸಬೇಕು ಎಂದು ತಿಳಿಸಿದರು.
ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅದು ಕಡಿಮೆಯಾಗಬೇಕು ಎಂದರೆ ಜನರಲ್ಲಿ ಜಾಗೃತಿ ಅಗತ್ಯ. ಪೊಲೀಸರು ತಡೆಗೆ ಪ್ರಯತ್ನ ಪಟ್ಟರೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದರೂ ಸೈಬರ್ ಅಪರಾಧಗಳು ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಅಗತ್ಯ. ಅಪರಾಧ ಮಾಡಬಾರದು, ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದು ಜನರಲ್ಲಿ ಅರಿವು ಮೂಡಬೇಕು. ಎಲ್ಲರೂ ಆರೋಗ್ಯವಂತರಾಗಿ ಸಮಾಜದ ಆಸ್ತಿಯಾಗಿ ಬಾಳಬೇಕು. ಅಂತಿಮವಾಗಿ ಎಲ್ಲ ಅಪರಾಧಗಳ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯ ಎಂದು ಹೇಳಿದರು