ಪೆಪ್ಸಿಕೋ ಸಂಸ್ಥೆ ಅಮೆರಿಕದಲ್ಲಿರುವ ತನ್ನ ನಾಲ್ಕು ಬಾಟ್ಲಿಂಗ್ ಯೂನಿಟ್ಗಳನ್ನು ಮುಚ್ಚಲು ನಿರ್ಧರಿಸಿದೆ. ಚಿಕಾಗೊ, ಸಿನ್ಸಿನಾಟಿ, ಪೆನ್ಸಿಲ್ವೇನಿಯಾ ಮತ್ತು ಅಟ್ಲಾಂಟಾದಲ್ಲಿರುವ ತನ್ನ ಬಾಟ್ಲಿಂಗ್ ಫ್ಯಾಕ್ಟರಿ ಬಂದ್ ಮಾಡಲು ನಿರ್ಧರಿಸಿದ್ದು ಇದರಿಂದ ನೂರಾರು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.
ತನ್ನ ಉತ್ಪನ್ನಗಳ ಮಾರಾಟ ಪ್ರಮಾಣ ಕಡಿಮೆ ಆಗಿರುವುದರಿಂದ ಈ ನಿರ್ಧಾರ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ. ಷೇರು ವಿನಿಮಯ ಕೇಂದ್ರಕ್ಕೆ ಪೆಪ್ಸಿಕೋ ನೀಡಿದ ಮಾಹಿತಿ ಪ್ರಕಾರ ಅಮೆರಿಕದ ಸಿನ್ಸಿನಾಟಿ, ಚಿಕಾಗೋ, ಪೆನ್ಸಿಲ್ವೇನಿಯಾ ಮತ್ತು ಅಟ್ಲಾಂಟಾದ ಬಾಟ್ಲಿಂಗ್ ಯೂನಿಟ್ಗಳು ಮುಚ್ಚಲ್ಪಡುತ್ತಿವೆ. ಸಿನ್ಸಿನಾಟಿಯಲ್ಲಿ 136 ಮಂದಿ, ಚಿಕಾಗೋದಲ್ಲಿ 131 ಮಂದಿ, ಪೆನ್ಸಿಲ್ವೇನಿಯಾದ ಹ್ಯಾರಿಸ್ಬರ್ಗ್ನಲ್ಲಿ 127 ಮಂದಿ ಹಾಗೂ ಅಟ್ಲಾಂಟಾದಲ್ಲಿ 45-50 ಮಂದಿಗೆ ಕೆಲಸ ಕಳೆದುಕೊಳ್ಳಲಿದ್ದಾರೆ.
ಮುಚ್ಚಲಾಗುತ್ತಿರುವ ನಾಲ್ಕು ಘಟಕಗಳ ಪೈಕಿ ಚಿಕಾಗೋ ಯೂನಿಟ್ ಪೂರ್ಣವಾಗಿ ಬಂದ್ ಆಗುತ್ತದೆ. ಇನ್ನುಳಿದ ಮೂರು ಘಟಕಗಳಲ್ಲಿ ಬಾಟ್ಲಿಂಗ್ ಯೂನಿಟ್ ಮಾತ್ರವೇ ಮುಚ್ಚಲಾಗುತ್ತದೆ. ವೇರ್ಹೌಸ್, ಸೇಲ್ಸ್, ಡೆಲಿವರಿ ಸೇವೆಗಳು ಈ ಮೂರು ಕಡೆ ಮುಂದುವರಿಯಲಿವೆ ಎನ್ನಲಾಗಿದೆ.
ಅಮೆರಿಕದ ನ್ಯೂಯಾರ್ಕ್ ಮೂಲದ ಪೆಪ್ಸಿಕೋ ಸಂಸ್ಥೆ ಅಮೆರಿಕದಲ್ಲಿ 75ಕ್ಕೂ ಹೆಚ್ಚು ಬಾಟ್ಲಿಂಗ್ ಘಟಕಗಳನ್ನು ಹೊಂದಿದೆ. ಹೀಗಾಗಿ, ನಾಲ್ಕು ಘಟಕಗಳನ್ನು ಮುಚ್ಚುತ್ತಿರುವುದು ಕಂಪನಿಗೆ ಆಘಾತಕಾರಿ ಸಂಗತಿಯಲ್ಲ. ಅದರ ಬಿಸಿನೆಸ್ ಕಡಿಮೆ ಆಗುತ್ತಿರುವ ಕಾರಣ, ಅದನ್ನು ಸರಿಹೊಂದಿಸಲು ಹಾಗೂ ಅನಗತ್ಯ ವೆಚ್ಚ ಕಡಿಮೆ ಮಾಡಲು ಬಾಟ್ಲಿಂಗ್ ಪ್ಲಾಂಟ್ಸ್ ಮುಚ್ಚುತ್ತಿದೆ.
ಪೆಪ್ಸಿಕೋಗೆ ಅತಿಹೆಚ್ಚು ಆದಾಯ ಅಮೆರಿಕದಿಂದಲೇ ಬರುತ್ತದೆ. ಇಲ್ಲಿಯೇ ಅದರ ಬಿಸಿನೆಸ್ ಕಡಿಮೆ ಆಗುತ್ತಿದೆ. ಚೀನಾದಲ್ಲೂ ಪೆಪ್ಸಿ ಡ್ರಿಂಕ್ಸ್ನ ಮಾರಾಟ ಕಡಿಮೆ ಆಗುತ್ತಿದೆ. ಈ ವರ್ಷ ಈ ಎರಡು ದೇಶಗಳಲ್ಲಿ ತನಗೆ ಕಡಿಮೆ ಬ್ಯುಸಿನೆಸ್ ಆಗಬಹುದು ಎಂದು ಸ್ವತಃ ಪೆಪ್ಸಿಕೋ ಅಂದಾಜು ಮಾಡಿದೆ. ಎರಡನೇ ಹಾಗೂ ಮೂರನೇ ಕ್ವಾರ್ಟರ್ನಲ್ಲಿ ಯುಎಸ್ಎನಲ್ಲಿ ಪೆಪ್ಸಿಕೋ ಸೇಲ್ಸ್ ಶೇ. 3ರಷ್ಟು ಕಡಿಮೆ ಆಗಿದೆ.