ಬೆಂಗಳೂರು : ಎಫ್ಸಿಐ ಗೋದಾಮುಗಳಲ್ಲಿ ಶೇಖರಣೆಯಾಗಿರುವ ಅಕ್ಕಿಗೆ ಹುಳ ಹಿಡಿದರೂ ಪರವಾಗಿಲ್ಲ. ಬಡವರಿಗೆ ಅಕ್ಕಿ ನೀಡಬಾರದು ಹಾಗೂ ಅಕ್ಕಿ ನೀಡದ ಶ್ರೇಯ ಕಾಂಗ್ರೆಸ್ಸಿಗೆ ಸಿಗಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಪೂರೈಸುವುದನ್ನು ತಡೆದಿದೆ. ಇದೇ ವೇಳೆ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ನೀಡುವ ವಿಚಾರವಾಗಿ ದೀರ್ಘಾವಧಿ ಯೋಜನೆ ರೂಪಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ನಾವು ಮಾತು ಕೊಟ್ಟಂತೆ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವತನಕ ಜನರ ಖಾತೆಗೆ ಹಣ ಪಾವತಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವ ಮುನಿಯಪ್ಪ ಅವರು ನಿಗದಿಯಷ್ಟುಅಕ್ಕಿಯನ್ನು ಹೊಂದಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಪಡಿತರ ಚೀಟಿದಾರರ ಖಾತೆಗೆ ಹಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಶೇ. 85ರಷ್ಟುಮಂದಿಯ ಬ್ಯಾಂಕ್ ಖಾತೆ ಪತ್ತೆ ಮಾಡಲಾಗಿದೆ. ಉಳಿದವರ ಬ್ಯಾಂಕ್ ಖಾತೆಯನ್ನು ಪತ್ತೆ ಮಾಡಬೇಕಿದೆ. ಎಲ್ಲ ಪಡಿತರ ಚೀಟಿದಾರರಿಗೂ ಅಕ್ಕಿ ನೀಡಲಾಗುವುದು’ ಎಂದು ಹೇಳಿದರು.