ಮಂಡ್ಯ: ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರ ಹೆಚ್ಚಳ (Price Hike) ಮಾಡಿದೆ. ಲೋಕಸಭೆ (Lok sabha Elections) ಹಾಗೂ ವಿಧಾನ ಪರಿಷತ್ ಚುನಾವಣೆಗಳು ಮುಕ್ತಾಯಗೊಂಡು ಫಲಿತಾಂಶ ಬಂದ ಬೆನ್ನಲ್ಲೇ ವಾಹನ ಸವಾರರ ಮೇಲೆ ಸೇಲ್ಸ್ ಟ್ಯಾಕ್ಸ್ ಬರೆ ಬಿದ್ದಿದೆ. ಪೆಟ್ರೋಲ್ ಬೆಲೆ ₹3, ಡೀಸೆಲ್ ಬೆಲೆ ₹3.5 ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಪೆಟ್ರೋಲ್, ಡೀಸೆಲ್ (Petrol Diesel) ದರ ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಎಂಎಲ್ಸಿ ಸಿ.ಟಿ ರವಿ ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಕ್ಕೆ ಬಂದ್ಮೇಲೆ ಕಾಂಗ್ರೆಸ್ (Congress Govt) ಎರಡಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಮೇಲಿನ ಸೆಸ್ ಜಾಸ್ತಿ ಮಾಡಿದೆ. ನಿಮ್ಮ ಜನ ವಿರೋಧಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.
ಇತ್ತ ಶ್ರೀ ಕ್ಷೇತ್ರ ಚುಂಚನಗಿರಿಗೆ ಭೇಟಿ ನೀಡಿದ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬೆಲೆ ಏರಿಕೆ ವಿಚಾರವಾಗಿ ವಾಗ್ದಾಳಿ ನಡೆಸಿದರು. ಬಿಜೆಪಿ ಜೆಡಿಎಸ್ ಪ್ರತಿಭಟನೆ ಮಾಡುವುದಕ್ಕಿಂತ ಸರ್ಕಾರದ ದುರಾಡಳಿತದ ವಿರುದ್ಧ ಜನರೇ ದಂಗೆ ಏಳಬೇಕು. ಜನರು ಪ್ರತಿಭಟಿಸುವ ಮೂಲಕ ಸರ್ಕಾರ ಎಚ್ಚರಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.