ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ಖಾತೆಗಳನ್ನು ಹೊಂದದೇ ತೆರಿಗೆ ಬಾಕಿ ಉಳಿಸಿಕೊಂಡ 5 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆ ಮೂಲಕ ತೆರಿಗೆ ಪಾವತಿಗೆ ಅವಕಾಶ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಅಗತ್ಯ ದಾಖಲೆಗಳನ್ನು ಹೊಂದಿದ ಪಾವತಿದಾರರಿಗೆ ಖಾತೆ ನೀಡಲು ಕ್ರಮ ಕೈಗೊಳ್ಳಲು ಸಿದ್ಧವಾಗಿದೆ.
ನಗರದಲ್ಲಿ ಸುಮಾರು 5-7 ಲಕ್ಷ ಆಸ್ತಿಗಳು ಖಾತೆ ಹೊಂದಿಲ್ಲದಿರುವುದರಿಂದ ತೆರಿಗೆ ವ್ಯಾಪ್ತಿಯಲ್ಲಿಲ್ಲ. ಅವೆಲ್ಲವನ್ನೂ ತೆರಿಗೆ ವ್ಯಾಪ್ತಿಗೆ ತರಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗಷ್ಟೆ ಒಂದು ಬಾರಿ ಪರಿಹಾರ (ಒಟಿಎಸ್) ವಿಶೇಷ ಯೋಜನೆಯನ್ನು ಘೋಷಿಸಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆರಿಗೆ ಪಾವತಿವಿಚಾರದಲ್ಲಿ ಒತ್ತಡ ಹಾಕಿರಲಿಲ್ಲ. ಆಸ್ತಿ ತೆರಿಗೆ ಕಟ್ಟದವರು ತೆರಿಗೆ ವ್ಯಾಪ್ತಿಗೆ ಬರಲು ಜುಲೈ 31ಕ್ಕೆ ಕೊನೆ ದಿನವಾಗಿದ್ದು, ಅಷ್ಟರಲ್ಲಿ ತೆರಿಗೆ ಪಾವತಿಸಿದರೆ ದಂಡ ಮತ್ತು ಬಡ್ಡಿಯಿಂದ ವಿನಾಯಿತಿ ದೊರೆಯಲಿದೆ
ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ವ್ಯಾಪ್ತಿಗೆ ಬರದೇ ಇರುವವರು ಬಹಳ ಜನ ಇದ್ದಾರೆ. ಕೆಲವು ಆಸ್ತಿ ಮಾಲೀಕರು ಬಿಬಿಎಂಪಿಯಿಂದ ಖಾತೆ ಪಡೆದಿಲ್ಲ. ಹೀಗಾಗಿ, ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಅಂತಹ ಮಾಲೀಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ, ಅವರಿಗೆ ತಾತ್ಕಾಲಿಕ ತೆರಿಗೆ ಸಂಖ್ಯೆ ಒದಗಿಸಲಾಗುವುದು. ಆ ಸಂಖ್ಯೆಯನ್ನು ಬಳಸಿಕೊಂಡು ಅವರು ತೆರಿಗೆ ಪಾವತಿಸಬಹುದಾಗಿದೆ. ಹೀಗೆ, ಮಾಡುವುದರಿಂದ ಮುಂದಿನ ದಿನಗಳಲ್ಲಿ ಕಟ್ಟಬಹುದಾದ ತೆರಿಗೆಯ ಮೇಲಿನ ದಂಡ ಮತ್ತು ಬಡ್ಡಿ ಮೊತ್ತ ಉಳಿತಾಯ ಮಾಡಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
ಪ್ರಕ್ರಿಯೆ ಹೇಗಿರುತ್ತದೆ
ಆಸ್ತಿ ಮಾಲೀಕರು ಒಟಿಪಿ ಬಳಸಿಕೊಂಡು ತಮ್ಮ ಮೊಬೈಲ್ ಮೂಲಕ ಬಿಬಿಎಂಪಿ ಆಸ್ತಿ ತೆರಿಗೆಯ ಸ್ವಯಂ ಮೌಲ್ಯಮಾಪನ ವ್ಯವಸ್ಥೆ (ಎಸ್ಎಎಸ್)ಗೆ ಲಾಗ್ ಇನ್ ಆಗಬೇಕು. ಅದರಲ್ಲಿ ಮಾರಾಟದ ಕರಾರು ಪತ್ರ (ಸೇಲ್ ಡೀಡ್) ಅಥವಾ ವರ್ಗಾವಣೆ ಪತ್ರದ ಸಂಖ್ಯೆಯನ್ನು ನಮೂದಿಸಬೇಕು. ಅದರ ಆಧಾರದ ಮೇಲೆ ಕಾವೇರಿ-2 ತಂತ್ರಾಂಶದಿಂದ ಆಸ್ತಿ ಮತ್ತು ಅದರ ಮಾಲೀಕರ ವಿವರದ ಪ್ರಮಾಣ ಪತ್ರ
ಒದಗಿಸಲಾಗುತ್ತದೆ. ಅನಂತರ ಆಸ್ತಿಯ ಚಿತ್ರ, ಅದರ ಜಿಪಿಎಸ್ ಇರುವ ವಿಳಾಸದ ಸಂಪೂರ್ಣ ವಿವರ ದಾಖಲಿಸಬೇಕು.
ಇದಾದ ನಂತರ ಆಧಾರ್ ಕಾರ್ಡ್ನಲ್ಲಿ ನಮೂದಿಸಿರುವಂತೆ ಮಾಲೀಕರ ವಿವರವನ್ನು ಕಾವೇರಿ-2 ತಂತ್ರಾಂಶದಲ್ಲಿ ಖರೀದಿದಾರರ ಹೆಸರಿಗೆ ಹೋಲಿಕೆ ಮಾಡಲಾಗುತ್ತದೆ. ಇವೆಲ್ಲವೂ ಒಂದಕ್ಕೊಂದು ಹೋಲಿಕೆಯಾಗಬೇಕು. ಆಗ ಮಾತ್ರ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹೋಲಿಕೆಯಾಗದಿದ್ದರೆ, ಮುಂದುವರಿಯಲು ಅವಕಾಶ ಇರುವುದಿಲ್ಲ. ಅಲ್ಲದೆ, ದಾಖಲೆಗಳು ನಕಲಿಯಾಗಿವೆ ಎಂಬುದರ ತನಿಖೆ ನಡೆಸಲು ಸಂಬಂಧಿಸಿದ ಕಂದಾಯ ಅಕಾರಿಗಳಿಗೆ ಕಳುಹಿಸಲಾಗುತ್ತದೆ