ಅಯೋಧ್ಯೆ: ಬರೋಬ್ಬರಿ 500 ವರ್ಷಗಳ ಕಾಯುವಿಕೆಗೆ ಇದೀಗ ಅಂತ್ಯ ಬಿದ್ದಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಈ ಮೂಲಕ 500 ವರ್ಷಗಳ ಬಳಿಕ ಬಾಲರಾಮ ತನ್ನ ಸ್ವಸ್ಥಾನಕ್ಕೆ ಮರಳಿದ್ದಾರೆ.
12 ಗಂಟೆ 30 ನಿಮಿಷ 32 ಸೆಕೆಂಡ್ಗಳ ಮಧ್ಯೆ ಅಭಿಜಿತ್ ಮುಹೂರ್ತದಲ್ಲಿ (ʼಅಭಿಜಿತ್ʼ ಅಂದ್ರೆ ʼಜಯಶಾಲಿʼ ಎಂದರ್ಥ) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದಕ್ಕೂ ಮುನ್ನ ಪ್ರಧಾನಿಯವರ ಸಾರಥ್ಯದಲ್ಲಿ ಮೂಲ ವಿಗ್ರಹದ ಎದುರು ವಿಧಿ-ವಿಧಾನಗಳನ್ನು ನೆರವೇರಿತು. ಗರ್ಭಗುಡಿಯಲ್ಲಿ ಪೂಜಾ-ಕೈಂಕರ್ಯಗಳು ನಡೆದವು. ಬಳಿಕ ಬಾಲರಾಮನ ಹಣೆಗೆ ಮೋದಿ ತಿಲಕವಿಟ್ಟರು. ಈ ಸಂದರ್ಭದಲ್ಲಿ ಶಂಖ, ಜಾಗಟೆಗಳು ಮೊಳಗಿದವು.
ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಆರ್ಎಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಹಾಗೂ ಅಯೋಧ್ಯೆಯ ಪ್ರಧಾನ ಅರ್ಚಕರು ಉಪಸ್ಥಿತರಿದ್ರು.
ಈ ದಿನಕ್ಕಾಗಿ ಪ್ರಧಾನಿಯವರು ಕಳೆದ 11 ದಿನಗಳಿಂದ ಕಠಿಣ ವ್ರತ ಕೈಗೊಂಡಿದ್ದರು. ಈ ನಡುವೆ ಹಲವಾರು ದೇಗುಲಗಳಿಗೆ ತೆರಳಿ ಪೂಜೆಯನ್ನೂ ಸಲ್ಲಿಸಿದ್ದರು. ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು, ರಾಜಕೀಯ ವ್ಯಕ್ತಿಗಳು ಸೇರಿದಂತೆ ಹಲವಾರು ಗಣ್ಯರು ಸೇರಿದಂತೆ ಸಾವಿರಾರು ಮಂದಿ ಈ ಕ್ಷಣಕ್ಕೆ ಸಾಕ್ಷಿಯಾದರು. ಒಟ್ಟಿನಲ್ಲಿ ಇಂದು ಎಲ್ಲೆಲ್ಲೂ ಜೈಶ್ರೀ ರಾಮ್ ಘೋಷಣೆ ಮೊಳಗುತ್ತಿದೆ. ಎಲ್ಲಾ ಕಡೆಯೂ ಶ್ರೀರಾಮನ ಗುಣಗಾನ ನಡೆಯುತ್ತಿದೆ.