ಶ್ರೀನಗರ: ಮೋದಿ ಜೀ.. ನೀವು ದೇಶದ ಮಾತು ಆಲಿಸುತ್ತೀರಾ . ದಯವಿಟ್ಟು ನನ್ನ ಮಾತನ್ನೂ ಕೇಳಿ. ನಮಗೆ ಒಂದೊಳ್ಳೆ ಶಾಲೆ ಕಟ್ಟಿಸಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕಾಶ್ಮೀರದ ಪುಟ್ಟ ಹುಡುಗಿ ಮನವಿ ಮಾಡಿದ್ದಾಳೆ. ಬಾಲಕಿಯ ಮನವಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಸೀರತ್ ನಾಜ್ ಎಂಬ ಬಾಲಕಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಯೊಂದನ್ನು ಮಾಡಿದ್ದಾಳೆ. ವೀಡಿಯೋದಲ್ಲಿ ತನ್ನ ಶಾಲೆಯ ದುಸ್ಥಿತಿ ಬಗ್ಗೆ ಬಾಲಕಿ ವಿವರಿಸಿದ್ದಾಳೆ. ಅಲ್ಲದೇ ಶಾಲೆಯ ಅವ್ಯವಸ್ಥೆಯನ್ನು ಸಹ ವೀಡಿಯೋದಲ್ಲಿ ಚಿತ್ರೀಕರಿಸಿದ್ದಾಳೆ.
ವೀಡಿಯೋದಲ್ಲಿ ಬಾಲಕಿ ಏನು ಹೇಳಿದ್ದಾಳೆ?
ಮೋದಿಜಿ, ನಾನು ನಿಮಗೆ ಒಂದು ವಿಷಯ ಹೇಳಬೇಕು. ನಮ್ಮ ಶಾಲೆಯ ನೆಲ ಎಷ್ಟು ಕೊಳಕಾಗಿದೆ ನೋಡಿ. ಶಿಕ್ಷಕರು ನಮ್ಮನ್ನು ಇಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತಾರೆ. ನಮ್ಮ ಶಾಲೆ ಇರುವ ದೊಡ್ಡ ಕಟ್ಟಡ ನೋಡಿ ಹೇಗಿದೆ. ಕಳೆದ 5 ವರ್ಷಗಳಿಂದ ಕಟ್ಟಡ ಎಷ್ಟು ಅಶುದ್ಧವಾಗಿದೆ ನೋಡಿ. ಶೌಚಾಲಯ ತುಂಬಾ ಕೊಳಕಾಗಿದೆ. ಬಾಗಿಲು ಮುರುದು ಹೋಗಿದೆ ನೋಡಿ.
ನಮಗಾಗಿ ಒಂದು ಉತ್ತಮವಾದ ಶಾಲೆಯನ್ನು ನಿರ್ಮಿಸಿಕೊಡುವಂತೆ ವಿನಂತಿಸುತ್ತೇನೆ. ಈಗ ನಾವು ನೆಲದ ಮೇಲೆ ಕುಳಿತುಕೊಳ್ಳಬೇಕಾಗಿರುವುದರಿಂದ ನಮ್ಮ ಸಮವಸ್ತ್ರಗಳು ಕೊಳಕಾಗುತ್ತವೆ. ಸಮವಸ್ತ್ರವನ್ನು ಕೊಳಕು ಎಂದು ಅಮ್ಮ ಆಗಾಗ್ಗೆ ನಮ್ಮನ್ನು ಬೈಯುತ್ತಾರೆ. ನಮಗೆ ಕುಳಿತುಕೊಳ್ಳಲು ಬೆಂಚುಗಳಿಲ್ಲ. ಪ್ಲೀಸ್ ಮೋದಿ ಜೀ, ಶಾಲೆಯ ಮೂಲಸೌಕರ್ಯಗಳನ್ನು ಉತ್ತಮಗೊಳಿಸಲು ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ. ದಯವಿಟ್ಟು ನನ್ನ ಆಸೆಯನ್ನು ಈಡೇರಿಸಿ.
ದಯವಿಟ್ಟು ನನ್ನ ಮಾತನ್ನೂ ಕೇಳಿ. ನಮಗೆ ಒಳ್ಳೆಯ ಶಾಲೆ ಕಟ್ಟಿಸಿಕೊಡಿ. ನಮಗೆ ಒಳ್ಳೆಯ ಶಾಲೆ ಇದ್ದರೆ ಚೆನ್ನಾಗಿ ಓದುತ್ತೇವೆ. ಶಾಲೆ ಚೆನ್ನಾಗಿ ನಮ್ಮ ಬಟ್ಟೆ ಕೊಳಕಾಗಲ್ಲ. ಆಗ ಮನೆಯಲ್ಲಿ ಅಮ್ಮ ರೇಗುವುದಿಲ್ಲ. ದಯವಿಟ್ಟು ನಮಗಾಗಿ ಒಂದು ಒಳ್ಳೆಯ ಶಾಲೆಯನ್ನು ನಿರ್ಮಿಸಿಕೊಡಿ ಎಂದು ವೀಡಿಯೋದಲ್ಲಿ ಬಾಲಕಿ ಮನವಿ ಮಾಡಿದ್ದಾಳೆ.