ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi), ಅವರು ಇಂದು ಬಂಗಾಳದ ಸಂದೇಶ್ ಖಾಲಿಯಿಂದ (Sandeshkhali Victim) ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ, ಹಾಲಿ ಬಸಿರ್ಹತ್ ಲೋಕಸಭಾ ಕ್ಷೇತ್ರದ (Basirhat Lok Sabha Election) ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾ (Rekha Patra) ಅವರಿಗೆ ಕರೆ ಮಾಡಿ ಚುನಾವಣಾ ಸಿದ್ಧತೆಗಳ ಬಗ್ಗೆ ಕೇಳಿದ್ದಾರೆ. ರೇಖಾ ಪಾತ್ರಾ ಅವರನ್ನು ಶಕ್ತಿ ಸ್ವರೂಪ ಎಂದು ಬಣ್ಣಿಸಿದ ಮೋದಿ ಸಂದೇಶಖಾಲಿಯ ಮಹಿಳೆಯರಿಗೆ ನೀವು ದೇವರಿದ್ದಂತೆ. ನಿಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಬಿಜೆಪಿ ಉತ್ತಮ ಕೆಲಸ ಮಾಡಿದೆ ಎಂದರು.
ಟಿಎಂಸಿ (TMC) ಕಿರುಕುಳದ ಬಗ್ಗೆ ಮೋದಿ ಅವರಲ್ಲಿ ದೂರು ನೀಡಿದ ರೇಖಾ ಪಾತ್ರಾ, 2011 ರಿಂದ ನಾವು ಇಲ್ಲಿ ಮತದಾನ ಮಾಡಲು ಸಾಧ್ಯವಾಗಲಿಲ್ಲ. ತೃಣಮೂಲ ಕಾಂಗ್ರೆಸ್ ನಾಯಕರು ಕಿರುಕುಳ ನೀಡುತ್ತಿದ್ದಾರೆ. ನಮಗೆ ನಮ್ಮ ಮತಗಳನ್ನು ಚಲಾಯಿಸಲು ಸೂಕ್ತ ಭದ್ರತೆಯನ್ನು (Security) ನೀಡುವಂತೆ ನಾವು ಮನವಿ ಮಾಡುತ್ತೇವೆ ಎಂದು ಕೇಳಿಕೊಂಡರು.
ನಾನು ಹಿಂದುಳಿದ ಕುಟುಂಬದಿಂದ ಬಂದಿದ್ದು ನನ್ನ ಪತಿ ಚೆನ್ನೈನಲ್ಲಿ ಕೆಲಸ ಮಾಡುತ್ತಾರೆ. ನಾವು ಜೀವನೋಪಾಯಕ್ಕಾಗಿ ಕಷ್ಟಪಡುತ್ತೇವೆ. ಜನರು ಇಲ್ಲಿ ಕೆಲಸ ಮಾಡುತ್ತಿದ್ದು ರಾಜ್ಯವನ್ನು ತೊರೆಯಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ಏನನ್ನಾದರೂ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದರು.
ಈ ವೇಳೆ ಮೋದಿ ನಿಮಗೆ ಗೆಲುವು ಸಿಗುವ ವಿಶ್ವಾಸವಿದೆ. ನೀವು ಶಕ್ತಿ ಸ್ವರೂಪ, ನೀವು ಅಂತಹ ಶಕ್ತಿಶಾಲಿಗಳನ್ನು ಜೈಲಿಗೆ ಕಳುಹಿಸಿದ್ದೀರಿ. ಮಹಿಳೆಯರ ಗೌರವಕ್ಕಾಗಿ ನಾವು ಒಟ್ಟಾಗಿ ಹೋರಾಡುತ್ತೇವೆ, ಬಸಿರ್ಹತ್ನಲ್ಲಿ ಮಾತ್ರವಲ್ಲ ಬಂಗಾಳದಾದ್ಯಂತ ನಿಮಗೆ ಬೆಂಬಲವಿದೆ ಎಂದು ತಿಳಿಸಿದರು.
ಬಂಗಾಳ ದುರ್ಗಾಪೂಜೆಯ ನಾಡು ಮತ್ತು ನೀವು ಆ ಶಕ್ತಿಯ ಸಾಕಾರವಾಗಿದ್ದೀರಿ. ಸಂದೇಶಖಾಲಿ ಮಹಿಳೆಯರ ಧ್ವನಿ ಎತ್ತುವುದು ಸುಲಭವಲ್ಲ, ಬಂಗಾಳದ ನಾರಿ ಶಕ್ತಿಯು ಈ ಬಾರಿ ನಮ್ಮನ್ನು ಆಶೀರ್ವದಿಸುತ್ತದೆ ಎಂದು ನಾನು ಭಾವಿಸುತ್ತೇವೆ. ತೃಣಮೂಲ ಕಾಂಗ್ರೆಸ್ನಿಂದ ಜನರು ಕಂಗಾಲಾಗಿದ್ದು, ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಮೋದಿ ಹೇಳಿದರು