ಬಿಜೆಪಿ ಸರ್ಕಾರ ಮುಸ್ಲಿಮರಿಗೆ ಪ್ರಶಸ್ತಿ ನೀಡುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನನ್ನ ಊಹೆಯನ್ನು ನೀವು ಸುಳ್ಳು ಮಾಡಿದ್ದೀರಿ ಎಂದು ಪದ್ಮಶ್ರೀ ಪ್ರಶಸ್ತಿ ಪಡೆದ ಕರ್ನಾಟಕದ ಖ್ಯಾತ ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಸಾಧಕರಿಗೆ ಪ್ರದ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಈ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಎಲ್ಲಾ ಸಾಧಕರನ್ನು ಅಭಿನಂದಿಸಿ ಹಸ್ತಲಾಘವ ಮಾಡುತ್ತಿದ್ದರು.
ಈ ವೇಳೆ ಮೋದಿ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಕೈ ಕುಲುಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಯುಪಿಎ ಸರ್ಕಾರದ ಅವಧಿಯಲ್ಲಿ ಪದ್ಮ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ. ಆದರೆ ನನಗೆ ಅದು ಸಿಗಲಿಲ್ಲ. ನಿಮ್ಮ ಬಿಜೆಪಿ ಸರ್ಕಾರ ಬಂದಾಗ ನನಗೆ ಯಾವುದೇ ಪ್ರಶಸ್ತಿ ಸಿಗುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನೀವು ನನ್ನ ಊಹೆ ತಪ್ಪು ಎಂದು ಸಾಬೀತುಪಡಿಸಿದ್ದೀರಿ. ನಿಮಗೆ ನಾನು ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.