ರಾಜಸ್ಥಾನದ ಗುಲಾಬಿ ಮರಳುಗಲ್ಲಿನಿಂದ ನಿರ್ಮಿಸಲಾದ ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಲಿದ್ದು, ಈ ದೇವಸ್ಥಾನವನ್ನು ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ಸ್ವಾಮಿನಾರಾಯಣ ದೇವಾಲಯವನ್ನು ನಿರ್ಮಿಸಿದೆ.
ಈ ದೇವಸ್ಥಾನವನ್ನು ಅಬುಧಾಬಿಯ ಮುರೇಖಾ ಜಿಲ್ಲೆಯಲ್ಲಿ 27 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಉದ್ಘಾಟನೆ ಹಿನ್ನೆಲೆ ಬಿಎಪಿಎಸ್ನ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಸ್ವಾಮಿ ಮಹಾರಾಜ್ ಅವರು ಯುಎಇಗೆ ಆಗಮಿಸಿದ್ದಾರೆ.
ಮಂದಿರದ ಉದ್ಘಾಟನೆಯನ್ನು ‘ಸೌಹಾರ್ದತೆಯ ಹಬ್ಬ’ದಂತೆ ಆಚರಿಸಲಾಗುತ್ತದೆ. ನಂಬಿಕೆಯನ್ನು ಬಲಪಡಿಸುವುದು, ಎಲ್ಲಾ ತಲೆಮಾರುಗಳು ಮತ್ತು ಹಿನ್ನೆಲೆಗಳುಳ್ಳ ಜನರ ನಡುವೆ ಸಾಮರಸ್ಯವನ್ನು ಬೆಳೆಸುವುದು ಈ ಉದ್ಘಾಟನಾ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಭಾರತ ಮತ್ತು ಯುಎಇ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ಈ ದೇವಾಲಯದ ಮೂಲೆ ಮೂಲೆಯಲ್ಲಿ ಭಾರತದ ವೈಭವವಿದೆ. ಇಲ್ಲಿ ವಾರಾಣಸಿಯನ್ನು ಕೂಡ ನೋಡಬಹುದು. ಅಬುಧಾಬಿಯಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯವು 108 ಅಡಿಗಳು. ಇದರಲ್ಲಿ 40,000 ಘನ ಅಡಿ ಅಮೃತಶಿಲೆ, 1,80,000 ಘನ ಅಡಿ ಮರಳುಗಲ್ಲು, 18,00,000 ಇಟ್ಟಿಗೆಗಳನ್ನು ಬಳಸಲಾಗಿದೆ. ದೇವಸ್ಥಾನದಲ್ಲಿ 300 ಸೆನ್ಸಾರ್ಗಳನ್ನು ಅಳವಡಿಸಲಾಗಿದೆ.