ಮಧ್ಯ ಪ್ರದೇಶ: ದೇಶದ ಯುವ ಸಮುದಾಯವನ್ನು ಕೇಂದ್ರ ಸರ್ಕಾರ ದಾರಿ ತಪ್ಪಿಸುತ್ತಿದೆ ಎಂದು ಆಪಾದಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ದೇಶದ ಯುವ ಸಮುದಾಯವು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ಮೋದಿ ಬಯಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯು ಮಧ್ಯ ಪ್ರದೇಶದ ಶಾಜಾಪುರ ತಲುಪಿದ್ದು, ಇಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ತಮ್ಮ ಆಕ್ರೋಶ ಹೊರ ಹಾಕಿದರು. ಇದೇ ವೇಳೆ, ದೇಶದಲ್ಲಿ ಸಾಮಾಜಿಕ ನ್ಯಾಯ ಸಾಧಿಸಬೇಕೆಂದರೆ ದೇಶಾದ್ಯಂತ ಜಾತಿ ಗಣತಿ ನಡೆಸಬೇಕಾದ ಅಗತ್ಯತೆ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕಾಂಗ್ರೆಸ್ ಪಕ್ಷವು ಎಂದಿಗೂ ಕ್ರಾಂತಿಕಾರಿ ಕೆಲಸ ಕಾರ್ಯಗಳಿಂದ ಗಮನ ಸೆಳೆದಿದೆ. ಹೀಗಾಗಿ ನಾವು ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಗಣತಿ ನಡೆಯಬೇಕು ಎಂದು ಬಯಸಿದ್ದೇವೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ನಮ್ಮದು. ಸ್ವಾತಂತ್ರ್ಯ ಹೋರಾಟದ ವೇಳೆ ಬಿಜೆಪಿ ಪಕ್ಷ ಎಲ್ಲಿ ಅಸ್ತಿತ್ವದಲ್ಲಿ ಇತ್ತು ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಭಾರತದಲ್ಲಿ ಹಸಿರು ಕ್ರಾಂತಿ, ಡಿಜಿಟಲ್ ಕ್ರಾಂತಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಕ್ರಾಂತಿಕಾರಿ ಕೆಲಸ ಕಾರ್ಯಗಳಿಂದ ಗುರ್ತಿಸಿಕೊಂಡಿದ್ದರೆ ಇತ್ತ ಪ್ರಧಾನಿ ಮೋದಿ ಅವರು ಈ ದೇಶದ ಯುವಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಇಡೀ ದಿನ ಅಂಟಿಕೊಂಡಿರಬೇಕು ಎಂದು ಬಯಸಿದ್ದಾರೆ. ಯುವಕರು ಜೈ ಶ್ರೀ ರಾಮ್ ಎಂದು ಘೋಣೆ ಕೂಗುತ್ತಾ ಹಸಿವಿನಿಂದ ನರಳಿ ಸಾಯಬೇಕು ಎಂದು ಪ್ರಧಾನಿ ಬಯಸಿದ್ದಾರೆ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರ ಹಾಕಿದರು.