ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಟಿ, ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದೆ. ಈ ಜೋಡಿಯ ಮದುವೆಗೆ ಹಲವು ಮಂದಿ ಗಣ್ಯರು ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿ ಕಳುಹಿಸಿದ ಪತ್ರವನ್ನು ಸುಮಲತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಮದುವೆಗೆ ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಸುಮಲತಾ ಮತ್ತು ಪುತ್ರ ಅಭಿಷೇಕ್.ಆಹ್ವಾನ ನೀಡಿದ್ದರು. ಆದರೆ ಮೋದಿ ಕೆಲಸದ ಒತ್ತಡದಿಂದಾಗಿ ಮದುವೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಧಾನಿ ನವ ಜೋಡಿಗೆ ಶುಭ ಹಾರೈಸಿ ಪತ್ರ ಬರೆದಿದ್ದು ಈ ಪತ್ರವನ್ನು ನಟಿ ಸುಮಲತಾ ಇದೀಗ ಶೇರ್ ಮಾಡಿದ್ದಾರೆ.
ಶುಭ ಕೋರಿ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ, ‘ಅಭಿಷೇಕ ಅಂಬರೀಶ್–ಅವಿವಾ ಬಿಡಪ್ಪ ಮದುವೆಗೆ ಶುಭಾಶಯಗಳನ್ನು ತಿಳಿಸಿ, ನವ ಜೋಡಿಯ ಹೊಸ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮ ಹಾರೈಕೆ, ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಎಂದು ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುವೆ’ ಎಂದು ಬರೆದುಕೊಂಡಿದ್ದಾರೆ.
ಮದುವೆ, ಆರತಕ್ಷತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಈಗಾಗಲೇ ಮುಗಿದಿದ್ದು, ಜೂನ್ 16 ರಂದು ಮಂಡ್ಯದ ಜನತೆಗೆ ಬೀಗರೂಟ ಏರ್ಪಡಿಸಲಾಗಿದೆ.ಭೀಗರೂಟದಲ್ಲಿ ಸುಮಾರು 50 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.