ಚೆನ್ನೈ: ಎರಡು ದಿನಗಳ ದಕ್ಷಿಣ ಭಾರತ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟರ್ಮಿನಲ್ನ ಮೊದಲ ಹಂತದ ಕಟ್ಟಡವನ್ನು ಉದ್ಘಾಟಿಸಿದರು.
ಅತ್ಯಾಕರ್ಷಕವಾಗಿ ನಿರ್ಮಿಸಲಾಗಿರುವ ಈ ಇಂಟಿಗ್ರೇಟೆಡ್ ಟರ್ಮಿನಲ್ನ ಮೊದಲ ಹಂತಕ್ಕೆ 1,250 ಕೋಟಿ ರೂ ವೆಚ್ಚವಾಗಿದೆ. “ಇದು ಚೆನ್ನೈನ ಮೂಲಸೌಕರ್ಯಕ್ಕೆ ಮಹತ್ವವಾದ ಸೇರ್ಪಡೆಯಾಗಿದೆ. ಇದು ಸಂಪರ್ಕವನ್ನು ವೃದ್ಧಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಗೆ ಕೂಡ ಅನುಕೂಲ ಮಾಡಿಕೊಡಲಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಟಿ-2 (ಎರಡನೇ ಹಂತ) ಕಟ್ಟಡವು ವಿಮಾನ ನಿಲ್ದಾಣದ ಪ್ರಯಾಣಿಕರ ಸಾಮರ್ಥ್ಯವನ್ನು ವರ್ಷಕ್ಕೆ 23 ಮಿಲಿಯನ್ನಿಂದ 30 ಮಿಲಿಯನ್ಗೆ ಹೆಚ್ಚಿಸುವ ನಿರೀಕ್ಷೆ ಇದೆ. ಇದರಲ್ಲಿ 100 ಚೆಕ್ ಇನ್ ಕೌಂಟರ್ಗಳು, 108 ವಲಸೆ ಕೌಂಟರ್ಗಳು, 17 ಎಸ್ಕಲೇಟರ್ಗಳು ಮತ್ತು 17 ಎಲಿವೇಟರ್ಗಳಿವೆ.
ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಸುಮಾರು 2.20 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ವಾಯು ಸಂಚಾರ ದಟ್ಟಣೆ ನಿರ್ವಹಿಸಲು ಇದು ನೆರವಾಗಲಿದೆ.
ಟರ್ಮಿನಲ್ನಲ್ಲಿ ಒಟ್ಟು 108 ವಲಸೆ ತಪಾಸಣಾ ಕೇಂದ್ರಗಳಿದ್ದು, ಆಗಮನ ಹಾಗೂ ನಿರ್ಗಮನದ ವಲಸೆ ಪ್ರಯಾಣಿಕರಿಗಾಗಿ ಇವುಗಳನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ. ಇವು ಪ್ರಯಾಣಿಕರು ಬಹಳ ವೇಗವಾಗಿ ವಲಸೆ ಸಂಬಂಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನೆರವಾಗುವುದರಿಂದ ಅವರ ಪ್ರಯಾಣ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅತ್ಯಾಧುನಿಕ ಸೌಲಭ್ಯಗಳು ಹಾಗೂ ಆಕರ್ಷಕವಾಗಿ ವಿನ್ಯಾಸ ಹೊಂದಿರುವ ನೂತನ ಕಟ್ಟಡದಲ್ಲಿನ ಸಾಂಪ್ರದಾಯಿಕ ಕಲೆಗಳು ಗಮನ ಸೆಳೆಯುತ್ತವೆ. ದಕ್ಷಿಣ ಭಾರತದ ವಿಶಿಷ್ಟ ಕಲೆಗಳಲ್ಲಿ ಒಂದಾದ ರಂಗೋಲಿಯ ಕೋಲಂ ಮಾದರಿಯಂತಹ ಸಾಂಪ್ರದಾಯಿಕ ಚಿತ್ರಣಗಳನ್ನು ಹೊಂದಿದೆ. ಸೀರೆಗಳು, ದೇವಾಲಯಗಳು ಹಾಗೂ ನೈಸರ್ಗಿಕ ಸೊಬಗನ್ನು ಬಿಂಬಿಸುವ ಇತರೆ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಆಧುನಿಕ ಮತ್ತು ಸಾಂಪ್ರದಾಯಿಕ ಅಂಶಗಳ ಮಿಶ್ರಣವು ಇಂಗಾಲದ ಅಸ್ತಿತ್ವವನ್ನು ತಗ್ಗಿಸುವ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಕೂಡ ಒಳಗೊಂಡಿದೆ.
ಕಟ್ಟಡದ ಒಳಗಿನ ಜಾಗಕ್ಕೆ ಬೆಳಕು ಹರಿಸಲು ಮತ್ತು ವಿದ್ಯುತ್ ಬಳಕೆಯನ್ನು ತಗ್ಗಿಸಲು ನೈಸರ್ಗಿಕ ಬೆಳಕನ್ನು ಉಪಯೋಗಿಸುವ ಸ್ಕೈಲೈಟ್ ಇಲ್ಲಿನ ಮತ್ತೊಂದು ಪ್ರಮುಖ ಅಂಶವಾಗಿದೆ.
ಕ್ಯಾರಿ ಬ್ಯಾಗೇಜ್ಗಳಿಗಾಗಿ 11 ಸ್ವಯಂಚಾಲಿತ ಟ್ರೇ ರಿಟ್ರೈವಲ್ ಸಿಸ್ಟಂ (ಎಟಿಆರ್ಎಸ್), 33 ರಿಮೋಟ್ ಬೋರ್ಡಿಂಗ್ ಗೇಟ್ಗಳು ಇದ್ದು, ಭದ್ರತಾ ತಪಾಸಣಾ ಪ್ರಕ್ರಿಯೆ ಸರಾಗವಾಗಿ ನಡೆಯಲು ನೆರವಾಗಲಿದೆ.