ಬೆಂಗಳೂರು:- ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ FIR ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಅವರು ಯಾರೋ ಮಹಿಳೆ ದೂರು ಕೊಟ್ಟಿದ್ದಾರೆ. ಕಾನೂನು ಪ್ರಕಾರ ಪೊಲೀಸರು ತನಿಖೆ ಮಾಡ್ತಿದ್ದಾರೆ. ಎಲ್ಲವೂ ಕಾನೂನು ಪ್ರಕಾರವೇ ನಡೆಯಲಿದೆ ಎಂದರು.
ನಿನ್ನೆ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸಿ ಕೇಸ್ ರಿಜಿಸ್ಟರ್ ಮಾಡಿದ್ದಾರೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡ್ತಿದ್ದಾರೆ. ತನಿಖೆ ಆಗುವ ವರೆಗೂ ಯಾವುದೇ ವಿಷಯ ತಿಳಿಸೋಕೆ ಆಗಲ್ಲ. ಇದು ಒಬ್ಬ ಮಾಜಿ ಸಿಎಂ ವಿಷಯಕ್ಕೆ ಸಂಬಂಧಿಸಿದ್ದು, ಇದು ಬಹಳ ಸೂಕ್ಷ್ಮ ವಿಷಯ. ಮಹಿಳೆಗೆ ರಕ್ಷಣೆ ಅಗತ್ಯ ಬಿದ್ದರೆ ಕೊಡ್ತೀವಿ. ವಶಕ್ಕೆ ಸಂಬಂಧಿಸಿದಂತೆ ತನಿಖೆಯ ಮೇಲೆ ನಿರ್ಧಾರ ಮಾಡ್ತೀವಿ. ಇದರ ಬಗ್ಗೆ ಡಿಸಿಎಂ, ಸಿಎಂ ಜೊತೆಗೂ ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿ ಗಳು ಕೂಡ ಇದರ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದರು.