ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳನ್ನು ಇಂದು ಮೈಸೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ರೇಣುಕಾಸ್ವಾಮಿಯ ಹತ್ಯೆ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲು ಮೈಸೂರಿಗೆ ತೆರಳಿದ್ದ ದರ್ಶನ್ ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು. ಪ್ರಕರಣದಲ್ಲಿ ಪೊಲೀಸರೆದುರು ಶರಣಾಗಲು ಹಿಂದೇಟು ಹಾಕಿದ್ದಾಗ ಆರೋಪಿಗಳನ್ನು ಮೈಸೂರಿಗೆ ಕರೆಸಿ ಅವರ ಮನವೊಲಿಸುವ ಪ್ರಯತ್ನವನ್ನು ದರ್ಶನ್ ಮಾಡಿದ್ದರು ಎನ್ನಲಾಗಿದೆ. ಆದ್ದರಿಂದ ದರ್ಶನ್ ಮೈಸೂರಿನಲ್ಲಿ ತಂಗಿದ್ದ ಹೋಟೆಲ್ ಗೂ ಪೊಲೀಸರು ಭೇಟಿ ನೀಡಿ ಅಲ್ಲೂ ಮಹತ್ವದ ಮಾಹಿತಿ ಕಲೆ ಹಾಕಲಿದ್ದಾರೆ. ದರ್ಶನ್ ಜೊತೆಗೆ ಇನ್ನೂ ಕೆಲ ಆರೋಪಿಗಳನ್ನು ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ.
ಈಗಾಗಲೇ ಆರೋಪಿಗಳ ವಿಚಾರಣೆ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಡಿಸಿಪಿ ಎಸ್.ಗಿರೀಶ್ ಭೇಟಿ ನೀಡಿದ್ದು, ಪ್ರಕರಣದ ತನಿಖೆಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಬೆಳಗ್ಗೆ 10:30ರ ನಂತರ ಆರೋಪಿಗಳನ್ನು ಮೈಸೂರಿಗೆ ಕರೆದೊಯ್ದು ದರ್ಶನ್ ತಂಗಿದ್ದ ಖಾಸಗಿ ಹೋಟೆಲ್, ಜಿಮ್ನಲ್ಲಿ ಪೊಲೀಸರು ಮಹಜರು ನಡೆಸಲಿದ್ದಾರೆ ಎನ್ನಲಾಗುತ್ತಿದೆ.