ಧಾರವಾಡ: ತಡರಾತ್ರಿಯಷ್ಟೇ ಧಾರವಾಡ ಹೊರವಲಯದ ಕಮಲಾಪುರದಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರೌಡಿ ಶೀಟರ್ ಆಗಿದ್ದ ಫ್ರೂಟ್ ಇರ್ಫಾನ್ ಮಗ ಅರಬಾಜ್ ಹಂಚಿನಾಳ, ನದೀಮ್ ಹಾಗೂ ರಹೀಂ ಸೇರಿದಂತೆ ನಾಲ್ಕು ಜನರನ್ನು ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.ರಿಯಲ್ ಎಸ್ಟೇಟ್ ಉದ್ಯಮಿ ಮಹ್ಮದ್ ಕುಡಚಿಯನ್ನು ಹತ್ಯೆ ಮಾಡಲು ಐದು ಜನರ ತಂಡ ನಿನ್ನೆ ರಾತ್ರಿ ಅವರ ಮನೆಗೆ ನುಗ್ಗಿತ್ತು. ತಾವು ಅಂದುಕೊಂಡಂತೆ ಮಹ್ಮದ್ನನ್ನು ಹತ್ಯೆ ಮಾಡಿದ ಆರೋಪಿಗಳು,
ಹತ್ಯೆ ಮಾಡುವ ಅವಸರದಲ್ಲಿ ತಮ್ಮ ಸಹಚರ ಗಣೇಶ ಕಮ್ಮಾರನ ಕಾಲಿಗೆ ಮಾರಕಾಸ್ತ್ರಗಳಿಂದ ಬಲವಾಗಿ ಹೊಡೆದಿದ್ದರು. ಇದರಿಂದ ಗಣೇಶ, ಮಹ್ಮದನ ಮನೆಯಿಂದ ಅನತಿ ದೂರ ಓಡಿ ಹೋಗಿ ಸಾವನ್ನಪ್ಪಿದ್ದ. ಉಳಿದ ನಾಲ್ಕು ಜನ ಆರೋಪಿಗಳು ಗಣೇಶನನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ರೌಡಿ ಶೀಟರ್ ಆಗಿದ್ದ ಫ್ರೂಟ್ ಇರ್ಫಾನ್ ರಿಯಲ್ ಎಸ್ಟೇಟ್ ಉದ್ಯಮಿ ಮಹ್ಮದ್ ಕುಡಚಿ ಜೊತೆ ವ್ಯವಹಾರ ಮಾಡುತ್ತಿದ್ದ. ತನ್ಮ ತಂದೆ ಫ್ರೂಟ್ ಇರ್ಫಾನ್ ಹತ್ಯೆ ನಂತರ ಮಗ ಅರಬಾಜ್, ಮಹ್ಮದ್ ಕುಡಚಿ ಜೊತೆ ವ್ಯವಹಾರ ಮಾಡಿಕೊಂಡಿದ್ದ. ವ್ಯವಹಾರದಲ್ಲಿ ಕಿರಿಕ್ ಆಗಿದ್ದೇ ಈ ಕೊಲೆಗೆ ಕಾರಣ ಎಂದು ಗೊತ್ತಾಗಿದೆ.
ಇಲ್ಲಿ ಹತ್ಯೆ ಮಾಡಿದ ನಂತರ ಆರೋಪಿಗಳು ದಾಂಡೇಲಿಗೆ ತೆರಳಿದ್ದರು. ಧಾರವಾಡದ ಪೊಲೀಸರ ತಂಡ ಅಲ್ಲಿಗೆ ಹೋಗಿ ಹುಡುಕಾಟ ನಡೆಸಿದ ನಂತರ ಆರೋಪಿಗಳು ಅಲ್ಲಿಂದ ಮುಂಡಗೋಡಕ್ಕೆ ಬಂದಿದ್ದರು. ಕೊನೆಗೆ ಪೊಲೀಸರು ನಾಲ್ಕೂ ಜನ ಆರೋಪಿಗಳನ್ನು ಮುಂಡಗೋಡದಲ್ಲಿ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹತ್ಯೆ ಆರೋಪಿಗಳ ಬಂಧನಕ್ಕೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರು ವಿಶೇಷ ತಂಡವೊಂದನ್ನು ರಚನೆ ಮಾಡಿದ್ದರು.