ಬೆಂಗಳೂರು: ಕಳ್ಳತನಕ್ಕೆ (Theft) ಸಾಥ್ ನೀಡಿದ ಆರೋಪದಡಿ ಪೊಲೀಸ್ ಕಾನ್ಸ್ಟೇಬಲನ್ನು (Police Constable) ಅಮಾನತುಗೊಳಿಸಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ (Banashankari Police Station) ಯಲ್ಲಪ್ಪ ಎಂಬ ಕಾನ್ಸ್ಟೇಬಲ್ ಕಳ್ಳರ ಗ್ಯಾಂಗ್ ಜೊತೆ ಸೇರಿ ಕಳ್ಳತನಕ್ಕೆ ಸಾಥ್ ನೀಡಿದ್ದರು. ಕೆಲದಿನಗಳ ಹಿಂದೆ ಮನೆ ಕಳ್ಳತನ ಮಾಡಿದ ಪ್ರಕರಣವೊಂದರಲ್ಲಿ ಬನಶಂಕರಿ ಪೊಲೀಸರು ಕಳ್ಳರನ್ನು ಸೆರೆಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಳ್ಳತನದಲ್ಲಿ ಅದೇ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಯಲ್ಲಪ್ಪನವರ ಪಾತ್ರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳ್ಳತನ ಮಾಡುವುದು ಹೇಗೆ? ತಪ್ಪಿಸಿಕೊಳ್ಳುವುದು ಹೇಗೆ? ಎಲ್ಲಿ ಕಳ್ಳತನ ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಿದ್ದ ಯಲ್ಲಪ್ಪ, ಕಳ್ಳತನದ ಹಣದಲ್ಲಿ ಪಾಲು ತೆಗೆದುಕೊಳ್ಳುತ್ತಿದ್ದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಈ ಆಧಾರದ ಮೇಲೆ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ಯಲ್ಲಪ್ಪನವರನ್ನು ವಿಚಾರಣೆ ನಡೆಸಿ ಅಮಾನತುಗೊಳಿಸುವಂತೆ (Suspend) ಆದೇಶ ನೀಡಿದ್ದಾರೆ.