ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಸದ್ಯದ ಮಟ್ಟಿಗೆ ಹೊರ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮತ್ತೆ ಮುಂದೂಡಿದೆ. ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು. ಪೊಲೀಸರ ತನಿಖೆಯನ್ನು ತೀವ್ರವಾಗಿ ಟೀಕಿಸಿದ ನಾಗೇಶ್, ಪ್ರಕರಣದಲ್ಲಿ ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆಂದು ವಾದಿಸಿದರು. ಆರೋಪ ಪಟ್ಟಿಯಲ್ಲಿ ದಾಖಲಿಸಿರುವ ಪ್ರಕರಣದ ಮಾಹಿತಿಗೂ, ಸಾಕ್ಷ್ಯಗಳು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸ ಇದೆಯೆಂದು ವಾದಿಸಿದ ಸಿವಿ ನಾಗೇಶ್, ರಸ್ತೆ ಬದಿ ಮ್ಯಾಜಿಕ್ ಮಾಡುವವರು ಖಾಲಿ ಡಬ್ಬ ತೋರಿಸಿ ಮೊಲ ಇದೆ ಎನ್ನುತ್ತಾರಲ್ಲ, ಪೊಲೀಸರ ಈ ತನಿಖೆ ಸಹ ಹಾಗೆಯೇ ಇದೆ ಎಂದರು.
ದರ್ಶನ್ ಮನೆಯಿಂದ ವಶಪಡಿಸಿಕೊಳ್ಳಲಾದ ಬಟ್ಟೆ, ಶೂಗಳ ವಿಷಯವಾಗಿ ನ್ಯಾಯಾಲಯದ ಗಮನ ಸೆಳೆದ ಸಿವಿ ನಾಗೇಶ್, ‘ನಾನು ಕೃತ್ಯ ನಡೆದ ದಿನದಂದು ಧರಿಸಿದ್ದ ವಸ್ತುಗಳನ್ನು ತೋರಿಸುತ್ತೇನೆ’, ಹೀಗೆಂದು ದರ್ಶನ್ ಹೇಳಿದ್ದಾಗಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಪಂಚನಾಮೆಯಲ್ಲಿ ದರ್ಶನ್ ಚಪ್ಪಲಿ ಧರಿಸಿದ್ದರೆಂದು ಹೇಳಿದ್ದಾಗಿ ಉಲ್ಲೇಖಿಸಿದ್ದಾರೆ. ಆದರೆ ಕೊನೆಗೆ ರಿಕವರಿ ಮಾಡಿರುವುದು ರಕ್ತದ ಕಲೆಯಿದೆ ಎನ್ನಲಾದ ಶೂ. ಶೂ ರಿಕವರಿ ಮಾಡಲು ಯಾವುದೇ ಸ್ವ ಇಚ್ಛಾ ಹೇಳಿಕೆ ಇರಲಿಲ್ಲ, ಬಟ್ಟೆಯನ್ನು ರಿಕವರಿ ಮಾಡಲು ಹೋದಾಗ ಅವು ಇರಲಿಲ್ಲ, ಅದನ್ನು ಒಗೆದು ಒಣಹಾಕಿದ್ದಾರೆಂದು ಹೇಳಿದ ಬಳಿಕ ರಿಕವರಿ ಮಾಡಲಾಗಿದೆ. ಒಗೆದು ಒಣಹಾಕಿದ ಬಟ್ಟೆಗಳಲ್ಲಿ ರಕ್ತದ ಕಲೆ ಇರಲು ಸಾಧ್ಯವೆ? ಸರ್ಫ್ ಪೌಡರ್ ಹಾಕಿ ಒಗೆದ ಬಟ್ಟೆಗಳಲ್ಲಿ ಕಲೆ ಇರಲು ಸಾಧ್ಯವೇ? ಆದರೆ ರಕ್ತದ ಕಲೆ ಇತ್ತೆಂದು ಪೊಲೀಸರು ಹೇಳಿದ್ದಾರೆ’ ಎಂದು ಸಿವಿ ನಾಗೇಶ್ ಹೇಳಿದರು.
‘ಜೂನ್ 14ರಂದು ವಿಳಂಬವಾಗಿ ಬಟ್ಟೆ, ಶೂ ವಶಕ್ಕೆ ಪಡೆಯಲಾಗಿದೆ, ಮೊದಲಿಗೆ ದರ್ಶನ್ ಬಿಟ್ಟ ಸ್ಥಳದಲ್ಲಿ ಶೂ ಇರಲಿಲ್ಲ, ಪತ್ನಿಯ ನೆಯಲ್ಲಿರಬಹುದೆಂದು ಹೇಳಿದ ಬಳಿಕ ಅಲ್ಲಿಗೆ ತೆರಳಿದರು, ನಂತರ ಪತ್ನಿ ಹಲವು ಶೂಗಳನ್ನು ಅಲ್ಲಿ ತಂದುಕೊಟ್ಟರು, ಇದರಲ್ಲಿ ಒಂದು ಶೂ ಅನ್ನು ರಿಕವರಿ ಮಾಡಿದ್ದಾರೆ, ಶೂ ಬಗ್ಗೆಯೇ ಸ್ಪಷ್ಟತೆ ಇಲ್ಲದಿರುವುದರಿಂದ ಇದಕ್ಕೆ ಮಾನ್ಯತೆ ಇಲ್ಲ, 37 ಲಕ್ಷ ಹಣದ ಬಗ್ಗೆಯೂ ಆರೋಪಪಟ್ಟಿಯಲ್ಲಿ ಉಲ್ಲೇಖವಿದೆ, ಮೇ 2ರಂದೇ ಈ ಹಣವನ್ನು ದರ್ಶನ್ಗೆ ನೀಡಲಾಗಿದೆ, ಈ ಹಣವನ್ನು ಮುಂದೆ ಸಾಕ್ಷಿಗಳಿಗೆ ನೀಡಲು ಇಟ್ಟಿದ್ದರೆಂದು ಹೇಳಲಾಗಿದೆ, ಮೇ 2ರಂದೇ ಬಂದ ಹಣವನ್ನು ಕೊಲೆಗೆಂದು ಇಡಲು ಸಾಧ್ಯವೇ?’ ಎಂದು ಸಿವಿ ನಾಗೇಶ್ ಪ್ರಶ್ನೆ ಮಾಡಿದರು.
ಇಂಥಹಾ ವಸ್ತುಗಳನ್ನು ವಶಪಡಿಸಿಕೊಳ್ಳುವುದು ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವ ತೀರ್ಪಿನ ಪ್ರತಿಯನ್ನು ಸಿವಿ ನಾಗೇಶ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಬಳಿಕ ಪೊಲೀಸರು ಜೂನ್ 9ರಂದೇ ಷೆಡ್ಗೆ ಹೋಗಿ ಕೆಲವು ವಸ್ತುಗಳನ್ನು ವಶಪಡೆದಿದ್ದಾರೆ ಎಂದು ಸಾಕ್ಷಿಗಳ ಹೇಳಿಕೆಯಲ್ಲಿ ದಾಖಲಾಗಿದೆ. ಆದರೆ ಜೂನ್ 12 ರಂದು ದರ್ಶನ್ ಅನ್ನು ಕರೆದುಕೊಂಡು ಹೋಗಿ ಮಹಜರು ಮಾಡಿದಾಗ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ ಎಂಬ ಅಂಶವನ್ನು ಸಹ ಸಿವಿ ನಾಗೇಶ್ ನ್ಯಾಯಾಲಯದ ಗಮನಕ್ಕೆ ತಂದರು.
ಸಿವಿ ನಾಗೇಶ್ರ ಸುದೀರ್ಘ ವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಇಂದು ಮಧ್ಯಾಹ್ನ 12:30ಕ್ಕೆ ಮುಂದೂಡಿದ್ದಾರೆ. ಪವಿತ್ರಾ ಗೌಡ ಜಾಮೀನು ಅರ್ಜಿಯೂ ಸಹ ಇಂದಿಗೆ ಮುಂದೂಡಲಾಗಿದೆ.