ಬೆಂಗಳೂರು : ಡ್ರಗ್ಸ್ ಮಾಫಿಯಾವನ್ನು ಕರ್ನಾಟಕದಲ್ಲಿ ನಿರ್ಮೂಲನೆ ಮಾಡಲು ದೃಢ ನಿರ್ಧಾರ ತೆಗೆದುಕೊಂಡಿದ್ದು ಪೊಲೀಸ್ ಇಲಾಖೆ ಈ ಮಾಫಿಯಾವನ್ನು ಮಟ್ಟಹಾಕಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್(Dr. G. Parameshwar) ತಿಳಿಸಿದರು. ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘ, ಬೆಂಗಳೂರಿನ ಸಪ್ತಗಿರಿ,
ಪ್ರಕ್ರಿಯ, ಸ್ಪರ್ಶ ಆಸ್ಪತ್ರೆರವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಮಲ್ಟಿಸ್ಪೆಷಲ್ ಮೆಡಿಕಲ್ ಕ್ಯಾಂಪ್ನ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತದಲ್ಲಿ ಡ್ರಗ್ ಮಾಫಿಯಾ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹೆಚ್ಚಿನದಾಗಿ ನಗರ ಪ್ರದೇಶದ ಯುವಕರು ಯುವಕಿಯರು ಈ ಮಾಫಿಯಾಗೆ ಬಲಿಯಾಗುತ್ತಿದ್ದು ಅವರ ನರಗಳ ಮೇಲೆ ಪರಿಣಾಮ ಬೀರುವುದರಿಂದ ಬೇಗ ದುರ್ಬಲರಾಗುತ್ತಿದ್ದಾರೆ.
ನಮ್ಮ ರಾಜ್ಯದಲ್ಲಿ ಈ ಡ್ರಗ್ಸ್ ದಂಧೆಯನ್ನು ಸಂಪೂರ್ಣ ಮಟ್ಟಹಾಕಲು ಪೊಲೀಸ್ ಇಲಾಖೆ ತೀರ್ಮಾನಿಸಿದ್ದು, ಕಾರ್ಯ ರೂಪಕ್ಕೂ ತರುತ್ತಿದ್ದೇವೆ. ಕಳೆದ ಒಂದುವರೆ ತಿಂಗಳಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು 150 ಕೋಟಿಯಿಂದ 200 ಕೋಟಿ ರು. ಗಳ ಮೌಲ್ಯದ ಡ್ರಗ್ಸ್ಗಳನ್ನು ಸುಟ್ಟು ಹಾಕಿ ನಾಶ ಮಾಡಲಾಗಿದೆ. ನಮ್ಮ ಪೊಲೀಸ್ ಇಲಾಖೆ ಬಹಳ ಶಕ್ತಿಯುತವಾಗಿ ಬೆಳೆಯುತ್ತಿದೆ. ವಿದ್ಯಾವಂತ ಮತ್ತು ಸದೃಢ ಯುವಕರು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತಷ್ಟುಯುವಕರಿಗೆ ಇಲಾಖೆಯಲ್ಲಿ ಆದ್ಯತೆ ನೀಡಲಾಗುವುದು ಎಂದರು.