ಅಪ್ರಾಪ್ತ ಬಾಲಕಿಯನ್ನು ಆಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋಷಿಯಲ್ ಮೀಡಿಯಾ ತಾರೆ ಸೋನು ಗೌಡ ಬಂಧನಕ್ಕೆ ಒಳಗಾಗಿದ್ದಾರೆ. ಇಂದು (ಮಾರ್ಚ್ 24) ಆಕೆಯನ್ನು ರಾಯಚೂರಿಗೆ ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ.
ರಾಯಚೂರಿನ ಬಾಲಕಿಯನ್ನು ದತ್ತು ಪಡೆದುಕೊಂಡಿರುವುದಾಗಿ ಸೋನು ಗೌಡ ವಿಡಿಯೋ ಮೂಲಕ ತಿಳಿಸಿದ್ದರು. ಆದರೆ ಸೋನು ಗೌಡ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಿದ್ದಾರೆಂದು ಆರೋಪಿಸಿ ಜಿಲ್ಲಾ ಮಕ್ಕಳು ಹಕ್ಕು ರಕ್ಷಣಾ ಘಟಕದ ಅಧಿಕಾರಿ ದೂರು ನೀಡಿದ್ದರು. ದೂರಿನ ಅನ್ವಯ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡರನ್ನು ಬಂಧಿಸಿದ್ದರು.
ಇಂದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡ ಅವರನ್ನು ಮಗುವಿನ ಊರಾದ ರಾಯಚೂರಿನ ಮಸ್ಕಿ ತಾಲ್ಲೂಕಿನ ಕಾಚಾಪುರ ಗ್ರಾಮಕ್ಕೆ ಕರೆತಂದು ಸ್ಥಳ ಮಹಜರು ಮಾಡಿದರು. ಮಗು ಪಡೆದುಕೊಂಡು ಹೋದ ಸ್ಥಳ,ಗ್ರಾಮದಲ್ಲಿ ಓಡಾಡಿ ಸ್ಥಳಗಳಲ್ಲಿ ಸ್ಥಳ ಮಹಜರು ಮಾಡಿದರು. ಅಲ್ಲದೆ, ಬಾಲಕಿಯನ್ನ ಗ್ರಾಮದಿಂದ ಕರೆದುಕೊಂಡು ಹೋಗಿದ್ದರ ಬಗ್ಗೆ ವಿಚಾರಣೆಯನ್ನು ಸಹ ಮಾಡಿದರು. ಸೋನುಗೌಡ ಜೊತೆಗೆ ಬ್ಯಾಡರಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ಬಂದು ಸ್ಥಳ ಮಹಜರು ಮಾಡಿದ್ದಾರೆ.
ಈ ನಡುವೆ ಅಪ್ರಾಪ್ತ ಬಾಲಕಿಯ ಪೋಷಕರು ಬೆಂಗಳೂರು ಬ್ಯಾಡರಹಳ್ಳಿ ಪೊಲೀಸರು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಪೊಲೀಸರು ಕರೆದ ಕಾರಣ ನಿನ್ನೆ (ಮಾರ್ಚ್ 23) ಬಾಲಕಿಯ ಪೋಷಕರು ರಾಯಚೂರಿನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಬಾಲಕಿಯ ಪೋಷಕರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.